ಬೆಂಗಳೂರು, ಸೆ.4- ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಆಕಾಶದಲ್ಲಿ ಅತ್ಯಂತ ಅಪರೂಪದ ಹಾಗೂ ಸುಂದರವಾದ ಖಗೋಳೀಯ ದೃಶ್ಯವೊಂದು ಗೋಚರಿಸಿತು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಹಾಗೂ ವಿಜ್ಞಾನಿ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಸೂರ್ಯನ ಸುತ್ತಲೂ ಕಾಮನಬಿಲ್ಲಿನಂತಹ ಸ್ಪಷ್ಟವಾದ ವೃತ್ತಾಕಾರದ ಪ್ರಭಾವಳಿ ಮೂಡಿಬಂದಿದ್ದು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿತು ಎಂದು ಅವರು ಹೇಳಿದ್ದಾರೆ.
ಹವಾಮಾನ ವಿಜ್ಞಾನದ ದೃಷ್ಟಿಕೋನದಲ್ಲಿ ಇದನ್ನು ‘22 ಡಿಗ್ರಿ ಹ್ಯಾಲೋ’ ಎಂದು ಕರೆಯಲಾಗುತ್ತದೆ. ಇದು ಸಂಪೂರ್ಣ ನೈಸರ್ಗಿಕ ಹಾಗೂ ವಾತಾವರಣದ ಭೌತಶಾಸ್ತ್ರಕ್ಕೆ ಸಂಬಂಧಿಸಿದ ವಿದ್ಯಮಾನವಾಗಿದೆ ಎಂದು ಅವರು ವಿವರಿಸಿದ್ದಾರೆ.
ವೈಜ್ಞಾನಿಕ ಕಾರಣವೇನು?
ವಾತಾವರಣದ ಅತ್ಯಂತ ಎತ್ತರದಲ್ಲಿ, ಅಂದರೆ ಸುಮಾರು 5ರಿಂದ 10 ಕಿಲೋಮೀಟರ್ ಎತ್ತರದಲ್ಲಿ ಸಿರಸ್ ಮಾದರಿಯ ತೆಳುವಾದ ಮೋಡಗಳು ಆವರಿಸಿಕೊಂಡಾಗ ಈ ರೀತಿಯ ಪ್ರಭಾವಳಿ ಉಂಟಾಗುತ್ತದೆ.
ಈ ಮೋಡಗಳಲ್ಲಿ ಲಕ್ಷಾಂತರ ಸೂಕ್ಷ್ಮ ಷಡ್ಭುಜೀಯ ಹಿಮದ ಹರಳುಗಳಿರುತ್ತವೆ. ಸೂರ್ಯನ ಬೆಳಕು ಈ ಹಿಮದ ಹರಳುಗಳ ಮೂಲಕ ಹಾದುಹೋಗುವಾಗ ಬೆಳಕಿನ ವಕ್ರೀಭವನ ಹಾಗೂ ವಿಚಲನೆ ಸಂಭವಿಸುತ್ತದೆ.
ಹಿಮದ ಹರಳುಗಳ ವಿಶಿಷ್ಟ ಆಕಾರದಿಂದಾಗಿ ಬೆಳಕು ಸುಮಾರು 22 ಡಿಗ್ರಿ ಕೋನದಲ್ಲಿ ಬಾಗುತ್ತದೆ. ಇದರಿಂದ ಸೂರ್ಯನ ಸುತ್ತಲೂ ಪ್ರಕಾಶಮಾನವಾದ ವೃತ್ತಾಕಾರದ ಪ್ರಭಾವಳಿ ಸೃಷ್ಟಿಯಾಗುತ್ತದೆ ಎಂದು ಸಿ.ಎಸ್.ಪಾಟೀಲ್ ವಿಶ್ಲೇಷಿಸಿದ್ದಾರೆ.
ಮೂಢನಂಬಿಕೆಗೆ ಕಿವಿಗೊಡಬೇಡಿ
ಈ ರೀತಿಯ ಪ್ರಭಾವಳಿ ಗೋಚರಿಸಿದಾಗ ಸಾರ್ವಜನಿಕರು ಯಾವುದೇ ರೀತಿಯ ಮೂಢನಂಬಿಕೆ ಅಥವಾ ಅಪಶಕುನದ ನಂಬಿಕೆಗಳಿಗೆ ಕಿವಿಗೊಡಬೇಕಿಲ್ಲ. ಇದು ಪ್ರಕೃತಿಯ ಸರಳ ಹಾಗೂ ಸುಂದರ ನಿಯಮವಾಗಿದೆ. ವಾತಾವರಣದ ಮೇಲ್ಭಾಗದಲ್ಲಿನ ತೇವಾಂಶ ಮತ್ತು ತಾಪಮಾನದ ಬದಲಾವಣೆಗಳನ್ನು ಸೂಚಿಸುವ ನೈಸರ್ಗಿಕ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಕೃತಿ ಪ್ರೇಮಿಗಳು ಹಾಗೂ ಖಗೋಳ ವಿದ್ಯಮಾನಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಇಂದು ಮಧ್ಯಾಹ್ನ ಸೆಂಟ್ರಲ್ ಕಾಲೇಜು ಆವರಣದಲ್ಲಿ ಈ ಅಪರೂಪದ ದೃಶ್ಯವನ್ನು ನೇರವಾಗಿ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದ್ದು, ರೋಮಾಂಚಕಾರಿ ಅನುಭವವಾಗಿತ್ತು ಎಂದು ಅವರು ತಿಳಿಸಿದ್ದಾರೆ.
