ಬೆಂಗಳೂರು, ಸೆ.22:- ಸೆಟ್ಬ್ಯಾಕ್ ಬಿಡದೆ ಕಾಮಗಾರಿ ನಡೆಸುತ್ತಿರುವ ಕಟ್ಟಡಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಬಿಎ ಮುಂದಾಗಿದೆ. ದೊಮ್ಮಲೂರು ಬಳಿ ಸೆಟ್ಬ್ಯಾಕ್ ಬಿಡದೆ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಕೂಡಲೇ ನೋಟೀಸ್ ಜಾರಿಗೊಳಿಸಿ, ನಿಯಮಬಾಹಿರ ನಿರ್ಮಾಣ ತೆರವುಗೊಳಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.ದೊಮ್ಮಲೂರಿನಲ್ಲಿ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದ್ದು, ಕಟ್ಟಡದ ನಾಲ್ಕೂ ಬದಿಗಳಲ್ಲೂ ಕಡ್ಡಾಯ ಸೆಟ್ಬ್ಯಾಕ್ ಬಿಡದೆ ಕಾಮಗಾರಿ ನಡೆಸುತ್ತಿರುವುದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ಮಾಲೀಕರಿಗೆ ತಕ್ಷಣ ನೋಟೀಸ್ ನೀಡಿ, ನಿಯಮಾನುಸಾರ ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅದೇ ಪ್ರದೇಶದಲ್ಲಿ ಸೆಟ್ಬ್ಯಾಕ್ ಬಿಡದೆ ನಿರ್ಮಿಸಿರುವ ವಾಣಿಜ್ಯ ಕಟ್ಟಡವನ್ನೂ ಪರಿಶೀಲಿಸಿದ ಅವರು, ಕಟ್ಟಡಕ್ಕೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಸೂಚಿಸಿದರು.
ದೊಮ್ಮಲೂರು ಮುಖ್ಯರಸ್ತೆಯ ಬದಿಯಲ್ಲಿ ಪಾದಚಾರಿ ಮಾರ್ಗ ಸಾಕಷ್ಟು ವಿಸ್ತಾರವಾಗಿರುವುದನ್ನು ಗಮನಿಸಿದ ಮಹೇಶ್ವರ್ ರಾವ್, ಇಲ್ಲಿ ವೆಂಡಿಂಗ್ ಜೋನ್ ಅಥವಾ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾದಚಾರಿ ಮಾರ್ಗದಲ್ಲಿರುವ ಗೋಡೆಗಳನ್ನು ತೆರವುಗೊಳಿಸಿ ಜನರು ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಫುಟ್ಪಾತ್ ಅಭಿವೃದ್ಧಿಪಡಿಸುವಂತೆಯೂ ನಿರ್ದೇಶನ ನೀಡಿದರು.ಇಂದಿರಾನಗರ 80 ಅಡಿ ರಸ್ತೆಯ ದೊಮ್ಮಲೂರು ಜಂಕ್ಷನ್ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಬೇಕು. ರಸ್ತೆ ದುರಸ್ತಿ ಕಾರ್ಯವನ್ನು ಗುಣಮಟ್ಟದಿಂದ ನಡೆಸುವಂತೆ ಸೂಚಿಸಿದರು. ಸಾಯಿಬಾಬಾ ಟೆಂಪಲ್ ರಸ್ತೆ ಹದಗೆಟ್ಟಿರುವುದನ್ನು ಗಮನಿಸಿ, ತಕ್ಷಣ ಡಾಂಬರೀಕರಣ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೊಮ್ಮಲೂರು ಭಾಗದ ಹಲವು ರಸ್ತೆಗಳಲ್ಲಿ ಜಲಮಂಡಳಿಯಿಂದ ಸ್ಯಾನಿಟರಿ ಲೈನ್ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆ ಪುನಶ್ಚೇತನಗೊಳಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಮಗಾರಿ ಪೂರ್ಣಗೊಂಡಿರುವ ರಸ್ತೆಗಳ ದುರಸ್ತಿ ಹಾಗೂ ಪುನಶ್ಚೇತನ ಕಾರ್ಯವನ್ನು ಕೂಡಲೇ ಕೈಗೊಳ್ಳುವಂತೆ ಸೂಚಿಸಿದರು. ಮಳೆ ಬಂದಾಗ ರಸ್ತೆಯ ಮೇಲೆ ಸಂಗ್ರಹವಾಗುವ ನೀರು ಚರಂಡಿಗೆ ಸರಾಗವಾಗಿ ಹರಿದುಹೋಗಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿದ ಮುಖ್ಯ ಆಯುಕ್ತರು, ಬಯೋಮೆಡಿಕಲ್ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಆಸ್ಪತ್ರೆಯ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ನವೆಂಬರ್ ಅಂತ್ಯಕ್ಕೆ ವಿಂಡ್ ಟನಲ್ ಕೆಳಸೇತುವೆವಿಂಡ್ ಟನಲ್ ಕೆಳಸೇತುವೆ ಕಾಮಗಾರಿಯನ್ನೂ ಪರಿಶೀಲಿಸಿದ ಅವರು, ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿರುವುದನ್ನು ಗಮನಿಸಿದರು.
ಬಾಕಿ ಇರುವ ಬಾಕ್ಸ್ ಪುಶಿಂಗ್ ಸೇರಿದಂತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನವೆಂಬರ್ ಅಂತ್ಯದೊಳಗೆ ಕೆಳಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್, ಅಪರ ಆಯುಕ್ತ ವೆಂಕಟಾಚಲಪತಿ, ಮುಖ್ಯ ಅಭಿಯಂತರರಾದ ಹೇಮಲತಾ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
