ಬೆಂಗಳೂರು, ಸೆ.22- ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆಸ್ತಿ ದಾಖಲೆಗಳು ಹಾಗೂ ಇ-ಖಾತಾ ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಇ-ಆಸ್ತಿ 2.0 ತಂತ್ರಾಂಶಕ್ಕೆ ಇಂದು ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು.ನಾಗರಿಕರಿಗೆ ಆಸ್ತಿ ಸಂಬಂಧಿತ ಸೇವೆಗಳನ್ನು ಸುಲಭವಾಗಿ, ವೇಗವಾಗಿ ಹಾಗೂ ಪಾರದರ್ಶಕವಾಗಿ ಒದಗಿಸುವ ಉದ್ದೇಶದಿಂದ ಈ ನೂತನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ಟೋಬರ್ 2024ರಲ್ಲಿ ಇ-ಆಸ್ತಿ 1.0 ತಂತ್ರಾಂಶವನ್ನು ಜಾರಿಗೊಳಿಸಲಾಗಿತ್ತು. ಇದರಡಿ ಸುಮಾರು 25 ಲಕ್ಷ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಗಣಕೀಕರಣಗೊಳಿಸಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿತ್ತು.
ತಂತ್ರಜ್ಞಾನ ಆಧಾರಿತ ಹಾಗೂ ನಾಗರಿಕ ಕೇಂದ್ರಿತ ಸೇವೆಗಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಈ ಯೋಜನೆಗೆ ಭಾರತ ಸರ್ಕಾರದ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ-2025 ದೊರೆತಿತ್ತು.ಇದೀಗ ಅದರ ಮುಂದುವರಿದ ಭಾಗವಾಗಿ ಜಿಬಿಎಯ ಆಂತರಿಕ ಮಾಹಿತಿ ತಂತ್ರಜ್ಞಾನ ತಂಡವು ಇ-ಆಸ್ತಿ 2.0 ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ಸುಧಾರಿತ ತಂತ್ರಜ್ಞಾನ, ಉತ್ತಮ ಬಳಕೆದಾರ ಅನುಭವ, ಸ್ವಯಂಚಾಲಿತ ಕಾರ್ಯವಿಧಾನ, ದತ್ತಾಂಶ ಸುರಕ್ಷತೆ ಹಾಗೂ ಇತರ ಸರ್ಕಾರಿ ವ್ಯವಸ್ಥೆಗಳೊಂದಿಗೆ ಸಮನ್ವಯಕ್ಕೆ ಆದ್ಯತೆ ನೀಡಲಾಗಿದೆ.ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಕ್ರಮ:ನೂತನ ವ್ಯವಸ್ಥೆಯ ನಾಗರಿಕ ಮಾಡ್ಯೂಲ್ ಮೂಲಕ ಸಾರ್ವಜನಿಕರು ಇ-ಖಾತಾ ಹಾಗೂ ಆಸ್ತಿ ಸಂಬಂಧಿತ ವಿವಿಧ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಲು ಹಾಗೂ ಪ್ರಕ್ರಿಯೆಯ ಪ್ರಗತಿಯನ್ನು ಗಮನಿಸಲು ಸಹ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡುವ ಅಗತ್ಯ ಕಡಿಮೆಯಾಗಲಿದೆ ಎಂದು ಜಿಬಿಎ ತಿಳಿಸಿದೆ.
ಕರಡು ಇ-ಖಾತಾವನ್ನು ಅಗತ್ಯ ಪರಿಶೀಲನೆಗಳ ಬಳಿಕ ಅಂತಿಮ ಇ-ಖಾತಾವಾಗಿ ಪರಿವರ್ತಿಸುವ ವ್ಯವಸ್ಥೆಯೂ ಇರಲಿದೆ. ಜತೆಗೆ, ಆಸ್ತಿ ಮಾಲೀಕತ್ವ ಬದಲಾವಣೆಗಳಿಗೆ ಸಂಬಂಧಿಸಿದ ಖಾತಾ ವರ್ಗಾವಣೆ ಅಥವಾ ಮುಟೇಷನ್ ಸೇವೆಗಳನ್ನು ಸಹ ನೂತನ ವ್ಯವಸ್ಥೆಯಡಿ ನಿರ್ವಹಿಸಬಹುದಾಗಿದೆ.ಬಹುಮಹಡಿ ಕಟ್ಟಡಗಳಿಗೂ ಹೊಸ ಸೌಲಭ್ಯಹೊಸ ಖಾತಾ ಹಾಗೂ ಬಹುಮಹಡಿ ಕಟ್ಟಡಗಳಲ್ಲಿನ ಫ್ಲ್ಯಾಟ್‌ಗಳು ಮತ್ತು ಇತರ ಘಟಕಗಳಿಗೆ ಸಂಬಂಧಿಸಿದ ಬಹು-ಘಟಕಗಳ ಹೊಸ ಖಾತಾ ಅರ್ಜಿಗಳನ್ನು ಸಲ್ಲಿಸಲು ಹಾಗೂ ವಿಲೇವಾರಿ ಮಾಡಲು ವ್ಯವಸ್ಥೆ ರೂಪಿಸಲಾಗಿದೆ.
ಅಲ್ಲದೆ, ಬಿಡಿಎ, ಬಿಎಂಐಸಿ,ಎಪಿಎ ಸೇರಿದಂತೆ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದಿಸಲಾದ ನಿವೇಶನ ವಿಭಜನೆ, ಅಂತಿಮ ಬಹುಮಹಡಿ ವಾಣಿಜ್ಯ ಘಟಕಗಳ ಎ-ಖಾತಾ ವಿಭಜನೆ ಹಾಗೂ ಅನ್ವಯವಾಗುವ ಇತರ ಆಸ್ತಿ ವಿಭಜನೆ ಪ್ರಕರಣಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ.ಅರ್ಹ ಆಸ್ತಿಗಳನ್ನು ನಿಗದಿತ ಆನ್‌ಲೈನ್ ಕಾರ್ಯಹರಿವಿನ ಮೂಲಕ ಒಂದುಗೂಡಿಸುವ ಅಮಾಲ್ಗಮೇಷನ್ ಮಾಡ್ಯೂಲ್‌ನ್ನೂ ಪರಿಚಯಿಸಲಾಗುತ್ತಿದೆ. ಇದರಿಂದ ಸಂಕೀರ್ಣ ಆಸ್ತಿ ವ್ಯವಹಾರಗಳನ್ನು ನಿರ್ವಹಿಸಲು ಅನುಕೂಲವಾಗಲಿದೆ.
ಕಾವೇರಿ, ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್‌ಬಿ ಜತೆ ಸಮನ್ವಯ :ಇ-ಆಸ್ತಿ 2.0ರ ಪ್ರಮುಖ ಅಂಶಗಳಲ್ಲಿ ಕಾವೇರಿ, ಬೆಸ್ಕಾಂ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಸೇರಿದಂತೆ ಇತರ ಸರ್ಕಾರಿ ವ್ಯವಸ್ಥೆಗಳೊಂದಿಗೆ ಸಮನ್ವಯವೂ ಸೇರಿದೆ.ಇ-ಖಾತಾ ಹಾಗೂ ಆಸ್ತಿ ಸಂಬಂಧಿತ ಮಾಹಿತಿಯ ವಿನಿಮಯದ ಮೂಲಕ ವಿವಿಧ ಇಲಾಖೆಗಳ ದಾಖಲೆಗಳನ್ನು ಸಮನ್ವಯಗೊಳಿಸುವ ಗುರಿ ಹೊಂದಲಾಗಿದೆ.
ಅರ್ಜಿಗಳ ಸ್ಥಿತಿಗತಿ, ಬಾಕಿ ಪ್ರಕರಣಗಳು ಹಾಗೂ ವಿಲೇವಾರಿ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಸುಧಾರಿಸಲು ಅಧಿಕಾರಿಗಳಿಗೂ ಪ್ರತ್ಯೇಕ ಇಲಾಖಾ ಮಾಡ್ಯೂಲ್ ಒದಗಿಸಲಾಗುತ್ತಿದೆ.ಹಂತ ಹಂತವಾಗಿ ಸೇವೆಗಳ ಕಾರ್ಯಾರಂಭಇ-ಆಸ್ತಿ 2.0ರ ವಿವಿಧ ಮಾಡ್ಯೂಲ್‌ಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ವೇಳಾಪಟ್ಟಿ ರೂಪಿಸಲಾಗಿದೆ.ದಿನಾಂಕಕಾರ್ಯಾರಂಭಗೊಳ್ಳುವ ಸೇವೆ:ಸೆ.21, 2026ನಾಗರಿಕ ಮಾಡ್ಯೂಲ್ ಹಾಗೂ ಇಲಾಖಾ ಮಾಡ್ಯೂಲ್ (ಬ್ಯಾಕ್‌ಆಫೀಸ್).ಸೆ.25, 2026ಅಂತಿಮ ಇ-ಖಾತಾ ತಿದ್ದುಪಡಿ, ಹೊಸ ಖಾತಾ ಹಾಗೂ ಬಹು-ಘಟಕಗಳ ಹೊಸ ಖಾತಾ ನಾಗರಿಕ ಮಾಡ್ಯೂಲ್.ಸೆ.30, 2026ಅಂತಿಮ ಇ-ಖಾತಾ ತಿದ್ದುಪಡಿ ಇಲಾಖಾ ಮಾಡ್ಯೂಲ್.
ಅಂತಿಮ ವಾಣಿಜ್ಯ ಬಹುಮಹಡಿ ಘಟಕಗಳ ಎ-ಖಾತಾ ವಿಭಜನೆ. ಆಸ್ತಿ ವಿಭಜನೆ ಹಾಗೂ ಉಪ-ವಿಭಜನೆ. ಆಸ್ತಿಗಳ ಒಂದುಗೂಡಿಸುವಿಕೆ (ಅಮಾಲ್ಗಮೇಷನ್).ಈ ಹಂತ ಹಂತದ ಅನುಷ್ಠಾನದಿಂದ ಸೇವೆಗಳ ನಿರಂತರತೆ ಕಾಪಾಡುವುದರ ಜತೆಗೆ, ತಂತ್ರಾಂಶದ ಪರೀಕ್ಷೆ, ಸಿಬ್ಬಂದಿಗೆ ತರಬೇತಿ ಹಾಗೂ ಕಾರ್ಯಾಚರಣಾ ಸಿದ್ಧತೆಗಳನ್ನು ಸಮರ್ಪಕವಾಗಿ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ಸಮಗ್ರ ಆಸ್ತಿ ನಿರ್ವಹಣೆಗೆ ವೇದಿಕೆ :ಜಿಬಿಎ ಹಾಗೂ ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಇ-ಆಸ್ತಿ 2.0 ಅನ್ನು ರೂಪಿಸಲಾಗಿದೆ. ಭವಿಷ್ಯದಲ್ಲಿ ಹೊಸ ಸೇವೆಗಳು ಹಾಗೂ ಮಾಡ್ಯೂಲ್‌ಗಳನ್ನು ತ್ವರಿತವಾಗಿ ಅಳವಡಿಸಲು ಅನುಕೂಲವಾಗುವ ತಾಂತ್ರಿಕ ವಾಸ್ತುಶಿಲ್ಪವನ್ನು ಹೊಂದಿದೆ.
ಡಿಜಿಟಲೀಕರಿಸಿದ ಹಾಗೂ ಭೌಗೋಳಿಕವಾಗಿ ಗುರುತಿಸಲಾದ ಆಸ್ತಿ ದಾಖಲೆಗಳು, ಆಸ್ತಿ ತೆರಿಗೆ ವ್ಯವಸ್ಥೆ, ನಗರ ಯೋಜನೆ ಮತ್ತು ಕಟ್ಟಡ ನಕ್ಷೆ ಅನುಮೋದನೆಗಳು, ಡಿಜಿಟಲ್ ಭೂನಕ್ಷೆಗಳು ಹಾಗೂ ಇತರ ಇಲಾಖೆಗಳ ದತ್ತಾಂಶಗಳ ಸಮನ್ವಯಕ್ಕೆ ಈ ವೇದಿಕೆ ಪೂರಕವಾಗಲಿದೆ. ಇದರಿಂದ ಬೆಂಗಳೂರಿನಲ್ಲಿ ತಂತ್ರಜ್ಞಾನ ಆಧಾರಿತ, ಪಾರದರ್ಶಕ ಹಾಗೂ ನಾಗರಿಕ ಕೇಂದ್ರಿತ ಆಸ್ತಿ ನಿರ್ವಹಣಾ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗುವ ನಿರೀಕ್ಷೆಯಿದೆ.
