ತಿರುವನಂತಪುರಂ, ಸೆ.27- ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗದ ವಿರುದ್ಧದ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸಿದರೆ ಮಾತ್ರ ಅವರನ್ನು ‘ವಂಚಕ’ ಎಂದು ಕರೆಯುವುದನ್ನು ನಿಲ್ಲಿಸುವುದಾಗಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ತಿರುಗೇಟು ನೀಡಿದ್ದಾರೆ. ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಚಂದ್ರಶೇಖರ್ ನೀಡಿದ್ದ ವೈಯಕ್ತಿಕ ಟೀಕೆಗಳನ್ನು ಸತೀಶನ್ ಖಂಡಿಸಿದ್ದರು.
ಇದಕ್ಕೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಚಂದ್ರಶೇಖರ್, ರಾಹುಲ್ ಗಾಂಧಿ ವಿರುದ್ಧ ವೈಯಕ್ತಿಕ ದಾಳಿ ನಡೆಸಲು ತಾನು ಸಾಮಾನ್ಯವಾಗಿ ಮುಂದಾಗುವುದಿಲ್ಲ. ಆದರೆ, ಅವರ ವಿಚಾರದಲ್ಲಿ ಹಾಗೆ ಮಾಡಬೇಕಾಯಿತು ಎಂದು ಹೇಳಿದ್ದಾರೆ.
2014ರಲ್ಲಿ ಮತದಾರರಿಂದ ಕಾಂಗ್ರೆಸ್ ತಿರಸ್ಕೃತಗೊಂಡ ಬಳಿಕ ರಾಹುಲ್ ಅವರ ರಾಜಕೀಯವು ಸುಳ್ಳು, ಅವಮಾನ ಮತ್ತು ವಿಭಜನೆಯ ಮೇಲೆ ನಿರ್ಮಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಸರ್ಕಾರದ ವಿರುದ್ಧ ರಾಹುಲ್ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದೂ ಚಂದ್ರಶೇಖರ್ ಆರೋಪಿಸಿದ್ದಾರೆ. ವಂಚನೆ ಮತ್ತು ಭ್ರಷ್ಟಾಚಾರದ ಮೇಲೆ ನಿರ್ಮಿತ ರಾಜಕೀಯ ನಡೆಸುತ್ತಿರುವ ರಾಹುಲ್ ಗಾಂಧಿಯನ್ನು ‘ವಂಚಕ’ ಎಂದು ಕರೆಯಲು ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಅವರು ಹೇಳಿದ್ದಾರೆ.
