Homeಬೆಂಗಳೂರುಕರೆನ್ಸಿ ವಿನಿಮಯ ನೆಪದಲ್ಲಿ ಸೊಪ್ಪಿನ ವ್ಯಾಪಾರಿಯ 8 ಲಕ್ಷ ದೋಚಿ ಪರಾರಿ

ಕರೆನ್ಸಿ ವಿನಿಮಯ ನೆಪದಲ್ಲಿ ಸೊಪ್ಪಿನ ವ್ಯಾಪಾರಿಯ 8 ಲಕ್ಷ ದೋಚಿ ಪರಾರಿ

ಬೆಂಗಳೂರು,ಸೆ.27- ಭಾರತೀಯ ರೂಪಾಯಿ ಕೊಟ್ಟರೆ ಅದಕ್ಕೆ ಹೆಚ್ಚಿಗೆ ಸೌದಿ ರಿಯಾಲ್‌ ಹಣ ಕೊಡುವುದಾಗಿ ಹೇಳಿ ಸೊಪ್ಪಿನ ವ್ಯಾಪಾರಿಯೊಬ್ಬರನ್ನು ಕರೆಸಿಕೊಂಡು ವೃತ್ತ ಪತ್ರಿಕೆಗಳಿರುವ ಬ್ಯಾಗೊಂದನ್ನು ನೀಡಿ 8 ಲಕ್ಷ ರೂ. ನಗದನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ಜಯನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.

ಶಿವಾಜಿನಗರದ ನಿವಾಸಿ ಮುಜಾಬ್‌ ಎಂಬುವರೇ ಹಣ ಕಳೆದುಕೊಂಡ ಸೊಪ್ಪಿನ ವ್ಯಾಪಾರಿ. ಇವರಿಗೆ ಪರಿಚಯವಿರುವ ವ್ಯಕ್ತಿಯೊಬ್ಬ ಭಾರತೀಯ ರೂಪಾಯಿಯನ್ನು ಕೊಟ್ಟರೆ ಅದಕ್ಕೆ ಹೆಚ್ಚಿಗೆ ಸೌದಿ ರಿಯಾಲ್‌ ಹಣ ಕೊಡುವುದಾಗಿ ಹೇಳಿದ್ದಾನೆ.ಬನಶಂಕರಿ ಮೆಟ್ರೋ ನಿಲ್ದಾಣದ ಬಳಿಗೆ ಭಾನುವಾರ ಮುಂಜಾನೆ 6 ಗಂಟೆಗೆ ನಗದನ್ನು ತೆಗೆದುಕೊಂಡು ಬರುವಂತೆ ಹೇಳಿದ್ದಾನೆ. ಆತನ ಮಾತನ್ನು ನಂಬಿದ ಮುಜಾಬ್‌ ಆರೋಪಿ ಹೇಳಿದ ಸ್ಥಳಕ್ಕೆ ನಗದನ್ನು ತೆಗೆದುಕೊಂಡು ಇಂದು ಮುಂಜಾನೆ ತನ್ನಿಬ್ಬರು ಸ್ನೇಹಿತರ ಜೊತೆ ಹೋಗಿದ್ದಾರೆ.

ಆಗ ಅಲ್ಲಿಗೆ ಬಂದ ಮೂವರು ಆರೋಪಿಗಳು ಬ್ಯಾಗ್‌ ಒಂದನ್ನು ನೀಡಿ ಅದರೊಳಗೆ ಸೌದಿ ರಿಯಾಲ್‌ ಹಣ ಇದೆ ಎಂದು ತಿಳಿಸಿ ಮುಜಾಬ್‌ನಿಂದ 8 ಲಕ್ಷ ರೂ. ನಗದನ್ನು ಪಡೆದುಕೊಂಡು ಪರಾರಿಯಾಗಿದ್ದಾರೆ. ಸ್ವಲ್ಪ ಸಮಯದ ನಂತರ ಅವರು ಬ್ಯಾಗ್‌ ಅನ್ನು ತೆಗೆದು ನೋಡಿದಾಗ ಅದರಲ್ಲಿ ಹಣದ ಬದಲಿಗೆ ವೃತ್ತಪತ್ರಿಕೆಗಳಿರುವುದು ಕಂಡುಬಂದಿದೆ.

ಇದರಿಂದ ಗಾಬರಿಯಾದ ಅವರು ತಕ್ಷಣ ಬನಶಂಕರಿ ಪೊಲೀಸ್‌‍ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೆಟ್ರೋ ನಿಲ್ದಾಣ ಸಮೀಪವಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ವಂಚಕರಿಗಾಗಿ ಶೋಧ ನಡೆಸುತ್ತಿದ್ದಾರೆ.

RELATED ARTICLES
spot_img

Latest News