ಬೆಂಗಳೂರು,ಅ.9 – ಐತಿಹಾಸಿಕ ಹಾಗೂ ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವವನ್ನು ಅಕ್ಟೋಬರ್ 11ರಂದು ಕೊಪ್ಪಳದ ಸಂಸ್ಥಾನ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ನಾಡದೇವಿ ಶ್ರೀ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಶಿಕ್ಷಣ, ಅನ್ನದಾಸೋಹ, ಪರಿಸರ ಸಂರಕ್ಷಣೆ, ಜಲಸಂರಕ್ಷಣೆ ಹಾಗೂ ಸಾಮಾಜಿಕ ಸೇವೆಗಳ ಮೂಲಕ ಲಕ್ಷಾಂತರ ಭಕ್ತರ ಪ್ರೀತಿ, ಗೌರವಕ್ಕೆ ಪಾತ್ರರಾಗಿರುವ ಶ್ರೀಗಳ ಜೀವನ ಮತ್ತು ಸಮಾಜಮುಖಿ ಕಾರ್ಯಗಳು ವಿಶೇಷ ಗಮನ ಸೆಳೆದಿವೆ.
ಸಾಮಾನ್ಯ ಕುಟುಂಬದಿಂದ ಗವಿಮಠದ ಪೀಠಾಧಿಪತಿವರೆಗೆ
ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು 1977ರಲ್ಲಿ ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದ ಸಾಮಾನ್ಯ ಜಂಗಮ ಕುಟುಂಬದಲ್ಲಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ಪರ್ವತಯ್ಯ ಹಿರೇಮಠ. ಕುಟುಂಬದ ಆರ್ಥಿಕ ಸಂಕಷ್ಟದಿಂದ ಬಾಲ್ಯದಲ್ಲಿ ಅವರ ಶಿಕ್ಷಣಕ್ಕೆ ಪದೇಪದೇ ಅಡಚಣೆ ಎದುರಾಗಿತ್ತು.
1989-90ರ ಅವಧಿಯಲ್ಲಿ ಗ್ರಾಮಕ್ಕೆ ಬಂದಿದ್ದ ವಿಜಯಪುರದ ತಮದಡ್ಡಿ ಮಠದ ಶ್ರೀ ಶಿವಶಂಕರ ಸ್ವಾಮೀಜಿಗಳು ಪರ್ವತಯ್ಯನವರ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಗದಗ ಜಿಲ್ಲೆಯ ಮುಂಡರಗಿಯ ಶ್ರೀ ಅನ್ನದಾನೇಶ್ವರ ಮಠಕ್ಕೆ ತೆರಳಲು ನಿರ್ಧರಿಸಿದರು. ಆದರೆ, ಮಾರ್ಗಮಧ್ಯೆ ಕೊಪ್ಪಳದಿಂದ ಮುಂಡರಗಿಗೆ ತೆರಳುವ ಕೊನೆಯ ಬಸ್ ತಪ್ಪಿದ ಕಾರಣ ಗವಿಮಠದಲ್ಲಿ ರಾತ್ರಿ ತಂಗಬೇಕಾಯಿತು.
ಆ ಸಂದರ್ಭದಲ್ಲಿ ಗವಿಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳು ಬಾಲಕನನ್ನು ಗಮನಿಸಿ, ಮಠದಲ್ಲೇ ಶಿಕ್ಷಣ ಮತ್ತು ವಸತಿ ಸೌಲಭ್ಯವಿರುವುದನ್ನು ತಿಳಿಸಿದರು. ಹೀಗಾಗಿ ಪರ್ವತಯ್ಯ ಗವಿಮಠದಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಿದರು. ಓದಿನೊಂದಿಗೆ ಮಠದ ಸೇವೆಯಲ್ಲಿಯೂ ತೊಡಗಿಸಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಬೆಳೆದರು.
ಬಸವಾದಿ ಶರಣರ ವಚನಗಳು ಸೇರಿದಂತೆ ಹಲವು ಗ್ರಂಥಗಳನ್ನು ಅಧ್ಯಯನ ಮಾಡಿದ ಅವರು, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿಯನ್ನು ರ್ಯಾಂಕ್ನೊಂದಿಗೆ ಪೂರ್ಣಗೊಳಿಸಿದರು. ನಂತರ ಪುಣೆ ಮತ್ತು ತಿರುಪತಿಯಲ್ಲಿ ತತ್ವಶಾಸ್ತ್ರ, ಸಂಸ್ಕೃತ ಹಾಗೂ ಆಂಗ್ಲ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದರು. ಗುರುಗಳ ಆಶಯದಂತೆ 2002ರ ಡಿಸೆಂಬರ್ 13ರಂದು 25ನೇ ವಯಸ್ಸಿನಲ್ಲಿ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳಾಗಿ ಪಟ್ಟಾಧಿಕಾರ ಸ್ವೀಕರಿಸಿದರು.
ಗವಿಮಠದ ಜಾತ್ರೆಗೆ ಹೊಸ ಆಯಾಮ :
ಜಾತ್ರೆ ಕೇವಲ ಧಾರ್ಮಿಕ ಆಚರಣೆ, ದೇವರ ದರ್ಶನ ಮತ್ತು ಪ್ರಸಾದ ವಿತರಣೆಗೆ ಸೀಮಿತವಾಗದೆ ಸಮಾಜದ ಸಮಸ್ಯೆಗಳ ಕುರಿತು ಚಿಂತನೆ ನಡೆಸುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ವೇದಿಕೆಯಾಗಬೇಕು ಎಂಬ ಆಶಯದೊಂದಿಗೆ ಶ್ರೀಗಳು ಗವಿಮಠದ ಜಾತ್ರೆಗೆ ಹೊಸ ಸ್ವರೂಪ ನೀಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು, ಸಾಮಾಜಿಕ ಜಾಗೃತಿ ಮತ್ತು ಮಹಾದಾಸೋಹಕ್ಕೆ ವಿಶೇಷ ಆದ್ಯತೆ ನೀಡಿದ್ದಾರೆ.
ಗವಿಮಠದ ಪರಂಪರೆಯಲ್ಲಿ ದಾಸೋಹಕ್ಕೆ ಮಹತ್ವದ ಸ್ಥಾನವಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಗೆ ಪ್ರಸಾದ ವಿತರಿಸುವ ವ್ಯವಸ್ಥೆ ವಿಸ್ತರಿಸಿದೆ. ಭಕ್ತರು ತಮ ಮನೆಗಳಿಂದ ರೊಟ್ಟಿ, ಧಾನ್ಯ, ತರಕಾರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ತಂದುಕೊಟ್ಟು ಸ್ವಯಂಪ್ರೇರಿತವಾಗಿ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಮೂಲಕ ಸಾಮೂಹಿಕ ಸೇವೆ ಮತ್ತು ಸಹಕಾರದ ಮನೋಭಾವಕ್ಕೆ ಉತ್ತೇಜನ ದೊರೆಯುತ್ತಿದೆ.
ಸಸ್ಯದಾಸೋಹ ಮತ್ತು ಜಲಸಂರಕ್ಷಣೆಗೆ ಒತ್ತು :
ಬಿಸಿಲಿನ ನಾಡು ಕೊಪ್ಪಳದಲ್ಲಿ ಹಸಿರು ವಾತಾವರಣ ನಿರ್ಮಿಸುವ ಉದ್ದೇಶದಿಂದ ಪ್ರತಿವರ್ಷ ಲಕ್ಷಾಂತರ ಸಸಿಗಳನ್ನು ನೆಡುವ ಮೂಲಕ ಶ್ರೀಗಳು ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಅನ್ನದಾಸೋಹದ ಜತೆಗೆ ಸಸ್ಯದಾಸೋಹದ ಪರಿಕಲ್ಪನೆಯನ್ನು ಪರಿಚಯಿಸಿ, ಮರಗಳನ್ನು ಬೆಳೆಸುವುದು ಮುಂದಿನ ಪೀಳಿಗೆಗೆ ಉಸಿರಿನ ಕೊಡುಗೆ ನೀಡಿದಂತೆ ಎಂಬ ಸಂದೇಶ ಸಾರುತ್ತಿದ್ದಾರೆ.
ಬರ ಮತ್ತು ನೀರಿನ ಸಮಸ್ಯೆಯ ನಿವಾರಣೆಗೆ ಜಲಸಂರಕ್ಷಣೆಯತ್ತಲೂ ಗಮನ ಹರಿಸಿದ್ದಾರೆ. ಕೊಪ್ಪಳ ತಾಲೂಕಿನ ಸುಮಾರು 25ರಿಂದ 26 ಕಿಲೋಮೀಟರ್ ವ್ಯಾಪ್ತಿಯ ಹಿರೇಹಳ್ಳದ ಪುನಶ್ಚೇತನಕ್ಕೆ ಪ್ರಯತ್ನ ನಡೆಸಲಾಗಿದೆ. ಸರ್ಕಾರದ ಸಹಕಾರದೊಂದಿಗೆ ಬ್ಯಾರೇಜ್ಗಳ ನಿರ್ಮಾಣ ಮತ್ತು ನೀರು ಸಂಗ್ರಹಣೆಗೆ ಒತ್ತು ನೀಡಲಾಗಿದೆ. ಇದರಿಂದ ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ನೀರಿನ ಅನುಕೂಲ ಕಲ್ಪಿಸುವುದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗುವ ಪ್ರಯತ್ನ ನಡೆದಿದೆ. ವಿವಿಧ ಕೆರೆಗಳ ಪುನಶ್ಚೇತನ ಹಾಗೂ ಜಾತ್ರೆಯಲ್ಲಿ ಜಲದೀಕ್ಷೆಯಂತಹ ಅಭಿಯಾನಗಳ ಮೂಲಕ ನೀರಿನ ಸಂರಕ್ಷಣೆಯ ಮಹತ್ವವನ್ನು ಸಾರಲಾಗುತ್ತಿದೆ.
ಶಿಕ್ಷಣ, ಜ್ಞಾನದಾಸೋಹ ಮತ್ತು ಸಾಮಾಜಿಕ ಕಾಳಜಿ :
ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಮುಖ ಸಾಧನ ಎಂಬ ನಂಬಿಕೆಯೊಂದಿಗೆ ಶ್ರೀಗಳು ಮಹಿಳಾ ಶಿಕ್ಷಣ, ಯುವಜನರ ಪ್ರಗತಿ, ವಿಶೇಷ ಚೇತನರ ಕಲ್ಯಾಣ, ಬಾಲ್ಯವಿವಾಹ ವಿರೋಧಿ ಜಾಗೃತಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅನ್ನದಾಸೋಹದಷ್ಟೇ ಜ್ಞಾನದಾಸೋಹವೂ ಮುಖ್ಯ ಎಂಬ ಚಿಂತನೆಯೊಂದಿಗೆ ಗ್ರಂಥಾಲಯಗಳು, ಶಿಕ್ಷಣ ಸಂಸ್ಥೆಗಳು, ವಸತಿ ವ್ಯವಸ್ಥೆ ಹಾಗೂ ಉಚಿತ ಶಿಕ್ಷಣಕ್ಕೆ ಉತ್ತೇಜನ ನೀಡಲಾಗಿದೆ. ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಧ್ಯೇಯದೊಂದಿಗೆ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಬಳಿ ವಿದ್ಯಾರ್ಥಿನಿಯರಿಗಾಗಿ ಉಚಿತ ಹೈಟೆಕ್ ವಸತಿ ಕಾಲೇಜನ್ನೂ ಸ್ಥಾಪಿಸಲಾಗಿದೆ. ಕೋವಿಡ್ ಅವಧಿಯಲ್ಲಿ ಗವಿಮಠ ಮತ್ತು ಶ್ರೀಗಳು ತೋರಿದ ಸಾಮಾಜಿಕ ಕಾಳಜಿಯ ಕಾರ್ಯಗಳೂ ಪ್ರಶಂಸೆಗೆ ಪಾತ್ರವಾಗಿವೆ.
ಅನ್ನದಾಸೋಹ, ಜ್ಞಾನದಾಸೋಹ, ಸಸ್ಯದಾಸೋಹ ಹಾಗೂ ಜಲಸಂರಕ್ಷಣೆಯ ಮೂಲಕ ಸಮಾಜಮುಖಿ ಸೇವೆಗೆ ಮಾದರಿಯಾಗಿರುವ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಅವರು ಅಕ್ಟೋಬರ್ 11ರಂದು ಮೈಸೂರು ದಸರಾವನ್ನು ಉದ್ಘಾಟಿಸಲಿದ್ದು, ಈ ಮೂಲಕ ನಾಡಿನ ಐತಿಹಾಸಿಕ ಉತ್ಸವಕ್ಕೆ ಆಧ್ಯಾತ್ಮಿಕ ಮೆರುಗು ನೀಡಲಿದ್ದಾರೆ.
