ನವದೆಹಲಿ,ಅ.10 ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಆಮ್ ಆದಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೇಶದಲ್ಲಿ ಅಶಾಂತಿ ಮತ್ತು ಅಸ್ಥಿರತೆಯನ್ನು ಸೃಷ್ಟಿಸಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಲವು ವಿದೇಶಿ ಶಕ್ತಿಗಳ ಸೂಚನೆಯ ಮೇರೆಗೆ ದೇಶದ ರಾಜಧಾನಿಯಲ್ಲಿ ಅಶಾಂತಿ ಹಾಗೂ ಅಸ್ಥಿರತೆ ಉಂಟುಮಾಡಲು ವಿಪಕ್ಷಗಳ ನಾಯಕರು ಸಂಚು ರೂಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 1.4 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸೌಹಾರ್ದತೆ ಮತ್ತು ಅಭಿವೃದ್ಧಿಗೆ ಆಡಳಿತಾರೂಢ ಸರ್ಕಾರ ಆದ್ಯತೆ ನೀಡಿದ್ದರೆ, ವಿಪಕ್ಷಗಳು ನಗರ ನಕ್ಸಲರಂತೆ ವರ್ತಿಸುತ್ತಾ ದೇಶದ ಶಾಂತಿಯನ್ನು ಕದಡಲು ಯತ್ನಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕ್ರಮಗಳು ಹಾಗೂ ಜಾಗತಿಕ ಸವಾಲುಗಳ ನಡುವೆಯೂ ಭಾರತ ಸಾಧಿಸುತ್ತಿರುವ ಪ್ರಗತಿಯನ್ನು ಚುನಾವಣಾ ಕಣದಲ್ಲಿ ಎದುರಿಸಲಾಗದೆ ಸೋತಿರುವ ವಿಪಕ್ಷಗಳು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರಲು ಯತ್ನಿಸುತ್ತಿವೆ ಎಂದು ನಬಿನ್ ಹೇಳಿದರು.
ಕೇಂದ್ರ ಸರ್ಕಾರವು ದೇಶದ ಭದ್ರತೆ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ತಕ್ಕ ರೀತಿಯಲ್ಲೇ ನಿಭಾಯಿಸುತ್ತದೆ ಮತ್ತು ವಿರೋಧ ಪಕ್ಷಗಳ ಈ ಸಂಚನ್ನು ಸಂಪೂರ್ಣವಾಗಿ ವಿಫಲಗೊಳಿಸುತ್ತದೆ ಎಂದು ಚ್ಚರಿಸಿದರು.
ಪ್ರತಿಪಕ್ಷಗಳ ನಾಯಕರು ದೇಶದ ಜನರ ತೀರ್ಪನ್ನು ಒಪ್ಪಿಕೊಳ್ಳುವ ಬದಲು ರಾಜಕೀಯ ಅಸ್ಥಿರತೆ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ನಬಿನ್ ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಎಎಪಿ ಸೇರಿದಂತೆ ಪ್ರತಿಪಕ್ಷಗಳ ರಾಜಕೀಯ ನಡೆಗಳನ್ನು ಪ್ರಶ್ನಿಸಿದ ಅವರು, ಭಾರತವನ್ನು ಅಸ್ಥಿರಗೊಳಿಸುವ ಯಾವುದೇ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಯಾರು ಹೆಚ್ಚು ಅಸ್ಥಿರತೆ ಸೃಷ್ಟಿಸಬಹುದು ಎಂಬ ಸ್ಪರ್ಧೆಯಲ್ಲಿ ತೊಡಗಿರುವವರ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಜನರು ಈಗಾಗಲೇ ಇಂತಹ ನಾಯಕರನ್ನು ತಿರಸ್ಕರಿಸಿದ್ದಾರೆೞೞ ಎಂಬ ಅರ್ಥದಲ್ಲಿ ನಬಿನ್ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹಲವು ಬಿಕ್ಕಟ್ಟುಗಳು ಎದುರಾಗುತ್ತಿದ್ದರೂ ಭಾರತ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ನಬಿನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ 12 ವರ್ಷಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ಉಲ್ಲೇಖಿಸಿದ ಅವರು, ಭಾರತೀಯ ಪ್ರಜಾಪ್ರಭುತ್ವಕ್ಕೆ ಬಲವಾದ ಅಡಿಪಾಯವಿದ್ದು, ದೇಶದ ಸ್ಥಿರತೆಗೆ ಧಕ್ಕೆ ತರುವ ಪ್ರಯತ್ನಗಳನ್ನು ಎದುರಿಸುವ ಸಾಮರ್ಥ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿ ಹಾಗೂ ಜನರ ಸೇವೆಗೆ ಬದ್ಧವಾಗಿದ್ದು, ರಾಜಕೀಯ ವಿರೋಧದ ನಡುವೆಯೂ ತನ್ನ ಕಾರ್ಯಸೂಚಿಯನ್ನು ಮುಂದುವರಿಸಲಿದೆ ಎಂದು ನಿತಿನ್ ನಬೀನ್ ತಿಳಿಸಿದ್ದಾರೆ.
