ನವದೆಹಲಿ,ಅ.10- ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂದು ಸಿಂಘು ಗಡಿಯಲ್ಲಿ (ದೆಹಲಿ-ಹರಿಯಾಣ ಗಡಿ) ಭದ್ರತಾ ತಪಾಸಣೆಯನ್ನು ತೀವ್ರಗೊಳಿಸಲಾಯಿತು. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ತುಳಸಿ ನಿಕೇತನ್ ಗಡಿಯಲ್ಲೂ ಪೊಲೀಸರು ವಾಹನಗಳ ತೀವ್ರ ತಪಾಸಣೆ ನಡೆಸಿದರು. ಈ ಸ್ಥಳದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.
ಇದೇ ವೇಳೆ, ರ್ಯಾಪಿಡ್ ಆಕ್ಷನ್ ಫೋರ್ಸ್(ಆರ್‌ಎಎಫ್)ಸಿಬ್ಬಂದಿ ಮಂಡಿ ಹೌಸ್ ವೃತ್ತದಿಂದ ಧ್ವಜ ಮೆರವಣಿಗೆ (ಫ್ಲ್ಯಾಗ್ ಮಾರ್ಚ್) ನಡೆಸಿದರು.ಕೋಟೆಯಂತಾದ ರಾಜಧಾನಿ: ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಇದಕ್ಕೂ ಮುನ್ನ, ದೆಹಲಿ ಪೊಲೀಸರು ಕನ್ನಾಟ್ ಪ್ಲೇಸ್ ಪ್ರದೇಶದಲ್ಲಿ ಧ್ವಜ ಮೆರವಣಿಗೆ ನಡೆಸಿದರು ಮತ್ತು ಜನಪಥ್ ಬಳಿ ಹಲವಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಅಎ ನಡೆಸಲಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯು ಉನ್ನತ ಭದ್ರತೆಯ ಕೋಟೆಯಂತಾಗಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ರಾಜಧಾನಿಯಾದ್ಯಂತ 35,000ಕ್ಕೂ ಹೆಚ್ಚು ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿ1ಲಾಗಿದೆ.
ಪ್ರತಿಭಟನೆಗೆ ಅನುಮತಿ ನಿರಾಕರಣೆ
ಹಿಂದಿನ ಹಿಂಸಾಚಾರದ ಘಟನೆಗಳನ್ನು ಉಲ್ಲೇಖಿಸಿ ಸಭೆ ಸೇರಲು ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, ಪ್ರತಿಭಟನೆಗೆ ಪ್ರಯತ್ನಿಸುವವರನ್ನು ವಶಕ್ಕೆ ಪಡೆಯುವಂತೆ ಸ್ಥಳದಲ್ಲಿದ್ದ ತಂಡಗಳಿಗೆ ಸೂಚನೆ ನೀಡಿದರು. ಛತ್ರಸಾಲ್ ಮತ್ತು ರಾಜೀವ್ ಗಾಂಧಿ ಕ್ರೀಡಾಂಗಣಗಳು ಸೇರಿದಂತೆ ಆರು ಕ್ರೀಡಾಂಗಣಗಳು ಮತ್ತು ಸಮುದಾಯ ಕೇಂದ್ರಗಳನ್ನು ತಾತ್ಕಾಲಿಕ ಬಂಧನ ಕೇಂದ್ರಗಳನ್ನಾಗಿ ಗೊತ್ತುಪಡಿಸಲಾಯಿತು.
ಸಿಬ್ಬಂದಿಗೆ ಬಂದೂಕುಗಳನ್ನು ಒಯ್ಯದಂತೆ ಸೂಚಿಸಲಾಗಿದ್ದು, ಪೊಲೀಸ್ ತಂಡಗಳಿಗೆ ಲಾಠಿಗಳನ್ನು ನೀಡಲಾಗಿತ್ತು. ಮೌಖಿಕ ಸಂಘರ್ಷಗಳನ್ನು ತಪ್ಪಿಸುವಂತೆ ನಿರ್ದೇಶನ ನೀಡಲಾಗಿದೆ. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಘರ್ಷವನ್ನು ತಡೆಯಲು, ಕರ್ತವ್ಯದಲ್ಲಿರುವ ದೆಹಲಿ ಪೊಲೀಸ್ ಸಿಬ್ಬಂದಿಗೆ ಸಮವಸ್ತ್ರಕ್ಕೆ ಅಳವಡಿಸಬಹುದಾದ ಬಾಡಿ ಕ್ಯಾಮೆರಾಗಳನ್ನು ನೀಡಲಾಗಿದೆ. ಇವು ಕಡಿಮೆ ಬೆಳಕಿನಲ್ಲೂ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿವೆ.
ಈ ಬಾಡಿ ಕ್ಯಾಮೆರಾಗಳು ನಮನ್ನು ಮತ್ತು ಇತರರನ್ನು ರಕ್ಷಿಸಲು ಇವೆ. ದೈಹಿಕ ಹಲ್ಲೆ ಅಥವಾ ದುರ್ವರ್ತನೆಯ ಸಂದರ್ಭಗಳಲ್ಲಿ ದೆಹಲಿ ಪೊಲೀಸರ ವಿರುದ್ಧ ಆರೋಪಗಳನ್ನು ಹೊರಿಸಲಾಗುತ್ತದೆ. ಹೀಗಾಗಿ ನಾವು ಯಾರಿಗಾದರೂ ಏನಾದರೂ ಮಾಡಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ಈ ಬಾಡಿ ಕ್ಯಾಮೆರಾಗಳು ಸಾಬೀತುಪಡಿಸುತ್ತವೆ. ಇವು ಎಲ್ಲವನ್ನೂ ದಾಖಲಿಸುತ್ತವೆ, ಎಂದು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದರು.
ಪ್ರಯಾಣಿಕರಿಗೆ ನಿರ್ಬಂಧಗಳು
ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ 35,000ಕ್ಕೂ ಹೆಚ್ಚು ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಕೇಂದ್ರ ಗೃಹ ಕಾರ್ಯದರ್ಶಿಯು ರಾಜ್ಯಗಳು ಮತ್ತು ಕೇಂದ್ರಾಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದ್ದಾರೆ. ಮುನ್ನೆಚ್ಚರಿಕಾ ಭದ್ರತಾ ಕ್ರಮವಾಗಿ, ದೆಹಲಿ ಮೆಟ್ರೋ ರೈಲು ನಿಗಮವು ಮಧ್ಯ ದೆಹಲಿಯ ಆಯ್ದ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಿದೆ. ಭದ್ರತಾ ನಿರ್ಬಂಧಗಳ ಕಾರಣದಿಂದಾಗಿ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.
