ನವದೆಹಲಿ/ಗುರುಗ್ರಾಮ,ಅ.10-ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಹಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಪ್ರಸಿದ್ಧ ಯೂಟ್ಯೂಬರ್ ಮತ್ತು ಸಾಮಾಜಿಕ ವಿಮರ್ಶಕ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ಬೆಳಿಗ್ಗೆ ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ಅವರ ನಿವಾಸದಿಂದ ಬಂಧಿಸಿದ್ದಾರೆ.
ಬೆಳಗಿನ ಜಾವ ಸುಮಾರು 50 ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ತಂಡವು ರಾಠಿಅವರ ಮನೆಗೆ ಆಗಮಿಸಿ ಅವರನ್ನು ವಶಕ್ಕೆ ತೆಗೆದುಕೊಂಡಿದೆ. ಜರ್ಮನಿಯಿಂದ ಈ ವಾರದ ಆರಂಭದಲ್ಲಷ್ಟೇ ಭಾರತಕ್ಕೆ ಆಗಮಿಸಿದ್ದ ಧ್ರುವ್ ರಥೀ, ಅಕ್ಟೋಬರ್ 8 ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ಶನಿವಾರದ ದೆಹಲಿ ಪ್ರತಿಭಟನೆಯಲ್ಲೂ ಭಾಗವಹಿಸುವುದಾಗಿ ಶುಕ್ರವಾರ ಸಂಜೆ ತಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದರು.
ಧ್ರುವ್ ರಾಠಿ ಅವರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಸಿಜೆಪಿ ನಾಯಕರು, ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಇತ್ತ ದೆಹಲಿ ಪೊಲೀಸರು ಭದ್ರತಾ ಕಾರಣಗಳನ್ನು ನೀಡಿ ಪ್ರತಿಭಟನೆಗೆ ಮುಂಚಿತವಾಗಿಯೇ ಅನುಮತಿಯನ್ನು ನಿರಾಕರಿಸಿದ್ದರು.
ಇದೇ ವೇಳೆ, ಸಿಜೆಪಿ ಕಾನೂನು ಕೋಶದ ಮುಖ್ಯಸ್ಥೆ ರತ್ನಾ ಸಿಂಗ್ ಅವರನ್ನೂ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರವು ಪೊಲೀಸ್ ಮತ್ತು ಸಿಆರ್‌ಪಿಎಫ್ ಸೇರಿದಂತೆ 20,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ.ಮುನ್ನೆಚ್ಚರಿಕಾ ಕ್ರಮವಾಗಿ ನೂರಾರು ರೈಲು ಸಂಚಾರ ರದ್ದುಗೊಳಿಸಲಾಗಿದ್ದು, ಹಲವು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ರಾತ್ರೋರಾತ್ರಿ 400 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
