ನವದೆಹಲಿ, ಅ.10- ಕಾಕ್ರೋಜ್ ಜನತಾ ಪಾರ್ಟಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮುಸ್ಲಿಂ ನಾಯಕರು ಪಾಲ್ಗೊಳ್ಳಬಾರದೆಂದು ಮುಸ್ಲಿಂ ಸಮುದಾಯಕ್ಕೆ ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷ ಡಾ. ಇಮಾಮ್ ಉಮರ್ ಅಹಮದ್ ಇಲ್ಯಾಸಿ ಮನವಿ ಮಾಡಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ನೀಡಿರುವ ಅವರು, ನಮ್ಮ ಪ್ರೀತಿಯ ದೇಶದಲ್ಲಿ ಉದ್ವಿಗ್ನತೆ, ಅಶಾಂತಿ ಅಥವಾ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಯಾವುದೇ ಪ್ರತಿಭಟನೆ, ಧರಣಿ, ಸಭೆ-ಸಮಾರಂಭಗಳಲ್ಲಿ ಭಾಗವಹಿಸಬೇಡಿ ಎಂದು ಎಲ್ಲಾ ಮುಸ್ಲಿಮರನ್ನು ಕೋರಿದ್ದಾರೆ.
ಕೆಲವು ದೇಶವಿರೋಧಿ ಶಕ್ತಿಗಳು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿವೆ. ನಮ್ಮ ದೇಶದ ಶಾಂತಿ ಮತ್ತು ಸೌಹಾರ್ದತೆಯನ್ನು ಕೆಡಿಸುವ ಸಂಚು ನಡೆಯುತ್ತಿದೆ. ನಾವು ಯಾರದ್ದೋ ಸ್ವಾರ್ಥಕ್ಕೆ ಬಳಕೆಯಾಗುವ ದಾಳಗಳಲ್ಲ ಎಂಬುದು ನೆನಪಿರಲಿ.
ಇಂದಿನವರೆಗೂ ಮುಸ್ಲಿಮರಾದ ನಮ್ಮನ್ನು ಕೇವಲ ಬಳಸಿಕೊಳ್ಳಲಾಗಿದೆ. ಇದು ನಾವು ಅತ್ಯಂತ ಧೈರ್ಯ ಮತ್ತು ವಿವೇಕದಿಂದ ವರ್ತಿಸಬೇಕಾದ ಸಮಯ. ಕೇವಲ ಭಾವೋದ್ವೇಗದಿಂದ ತೆಗೆದುಕೊಳ್ಳುವ ನಿರ್ಧಾರಗಳು ಅಪರೂಪಕ್ಕೆ ಮಾತ್ರ ಸರಿಯಾಗುತ್ತವೆ. ಧೈರ್ಯದಿಂದ ಕೆಲಸ ಮಾಡಿ, ವಿವೇಕದಿಂದ ಕೈಗೊಳ್ಳುವ ನಿರ್ಧಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.
ಬಹುತೇಕ ರಾಜಕೀಯ ಪಕ್ಷಗಳು ನಮ್ಮನ್ನು ಬಳಸಿಕೊಂಡಿವೆ. ಹಿಂದೆ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿಯೂ ನಾನು ಇದೇ ರೀತಿ ಮನವಿ ಮಾಡಿದ್ದೆ. ಅನೇಕರು ಅದನ್ನು ಆಲಿಸಿದರು. ನನ್ನ ಮನವಿಯನ್ನು ನಿರ್ಲಕ್ಷಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವರು ಇಂದಿಗೂ ಜೈಲಿನಲ್ಲಿದ್ದಾರೆ.
ಅವರ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಅವರಿಗೆ ಜಾಮೀನು ಕೊಡಿಸಲು ಯಾರೂ ಇಲ್ಲ. ಆದ್ದರಿಂದ ಯಾವುದೇ ರಾಜಕೀಯ ಪಕ್ಷದ ದಾರಿತಪ್ಪಿಸುವ ಮಾತುಗಳಿಗೆ ಮರುಳಾಗಬೇಡಿ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇದರಿಂದ ನಮಗೆ ಯಾವುದೇ ಲಾಭವಿಲ್ಲ. ನೀವು ಪ್ರತಿಭಟನೆಗೆ ಹೋಗಬೇಡಿ. ನಿಮ್ಮ ಮಕ್ಕಳನ್ನೂ ಕೂಡ ಕಳುಹಿಸಬೇಡಿ ಎಂದು ಹೇಳಿದ್ದಾರೆ.
