Homeರಾಷ್ಟ್ರೀಯದೆಹಲಿ ಪೊಲೀಸರು, ಮೆಟ್ರೋ ಮತ್ತು ರೈಲ್ವೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

ದೆಹಲಿ ಪೊಲೀಸರು, ಮೆಟ್ರೋ ಮತ್ತು ರೈಲ್ವೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

ನವದೆಹಲಿ,ಅ.10-ಕೇಂದ್ರ ಸರ್ಕಾರ, ಮೆಟ್ರೋ ಮತ್ತು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ಜಿರಳೆ ಜನತಾ ಪಕ್ಷ (ಸಿಜೆಪಿ) ಮತ್ತು ಇತರ ಸಂಘಟನೆಗಳು ನೀಡಿದ್ದ ದೆಹಲಿ ಚಲೋ ಪ್ರತಿಭಟನೆ ಕರೆಯ ಹಿನ್ನೆಲೆಯಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ಮೆಟ್ರೋ ಹಾಗೂ ರೈಲು ಸೇವೆಗಳ ಮೇಲೆ ಸಂಪೂರ್ಣ ನಿಷೇಧ ಹೇರಿದ್ದ ಅಧಿಕಾರಿಗಳ ನಡೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದ್ದರೂ, ಆದೇಶವನ್ನು ಉಲ್ಲಂಘಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಿಜೆಪಿ ಪ್ರತಿಭಟನಾ ಪ್ರಕರಣದ ಪ್ರಮುಖ ಅರ್ಜಿದಾರರಾದ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಮತ್ತು ಚಂದ್‌ ಖುರೇಷಿ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ನವದೆಹಲಿ ಮತ್ತು ಹಜರತ್‌ ನಿಜಾಮುದ್ದೀನ್‌ ರೈಲು ನಿಲ್ದಾಣಗಳಲ್ಲಿ ಮೆಟ್ರೋ ಮತ್ತು ರೈಲುಗಳ ಆಗಮನದ ಮೇಲೆ ಸಂಪೂರ್ಣ ನಿಷೇಧ ಹೇರುವುದು ಅತಿಯಾದ ಕ್ರಮ (ಅತಿಕ್ರಮಣ) ಎಂದು ಅಭಿಪ್ರಾಯಪಟ್ಟಿತ್ತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರಿಗೆ ಸೇವೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ, ಸಾರ್ವಜನಿಕ ಸೂಚನೆಗಳೊಂದಿಗೆ ಕಾರ್ಯಾಚರಣೆ ನಡೆಸಲು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಆದರೆ, ಸುಪ್ರೀಂ ಕೋರ್ಟ್‌ ಆದೇಶ ಮತ್ತು ನೀಡಿದ್ದ ಭರವಸೆಯ ಹೊರತಾಗಿಯೂ, ಅಧಿಕಾರಿಗಳು ದೆಹಲಿ ಮೆಟ್ರೋದ ಸುಮಾರು 57 ನಿಲ್ದಾಣಗಳನ್ನು ಸಾರ್ವಜನಿಕ ಬಳಕೆಗೆ ಮುಚ್ಚಿದ್ದಾರೆ. ಅಲ್ಲದೆ, ರೈಲು ಸೇವೆಗಳನ್ನು ಅನಗತ್ಯವಾಗಿ ರದ್ದುಗೊಳಿಸಿ, ಸಂಪೂರ್ಣ ಬಂದ್‌ ವಾತಾವರಣವನ್ನು ಕಾಯ್ದುಕೊಂಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ನ್ಯಾಯಾಂಗ ನಿಂದನೆ ಅರ್ಜಿಯ ಪ್ರಮುಖ ಅಂಶಗಳು
ಉದ್ದೇಶಪೂರ್ವಕ ಅವಿಧೇಯತೆ: ದೇಶದ ಅತ್ಯುನ್ನತ ನ್ಯಾಯಾಲಯದ ಆದೇಶವನ್ನು ಆಡಳಿತ ವ್ಯವಸ್ಥೆಯು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದು, ನ್ಯಾಯಾಲಯದ ಘನತೆಯನ್ನು ಕುಗ್ಗಿಸುವ ಪ್ರಯತ್ನ ಮಾಡಿದೆ.ಸಾರಿಗೆ ಬಂದ್‌ನಿಂದಾಗಿ ದೆಹಲಿ-ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಲಕ್ಷಾಂತರ ಪ್ರಯಾಣಿಕರು ಮತ್ತು ಅಗತ್ಯ ಕೆಲಸಗಳಿಗೆ ತೆರಳುವ ಜನರು ಪರದಾಡುವಂತಾಗಿದೆ.ಸಂಚಾರ ಸಲಹೆಗಳು ಮತ್ತು ವೇಳಾಪಟ್ಟಿ ಬದಲಾವಣೆಯ ಕುರಿತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿಲ್ಲ.

ಅರ್ಜಿದಾರರ ಪ್ರಮುಖ ಬೇಡಿಕೆಗಳು:
ಸುಪ್ರೀಂ ಆದೇಶ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ೞನ್ಯಾಯಾಲಯ ನಿಂದನೆ ಕಾಯ್ದೆ, 1971ರ ಸೆಕ್ಷನ್‌ 12 ಹಾಗೂ ಸಂವಿಧಾನದ ವಿಧಿ 129ರಡಿ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್‌‍ ನೀಡಬೇಕು.

ಮೆಟ್ರೋ ಮತ್ತು ರೈಲ್ವೇ ಮೇಲಿನ ಸಂಪೂರ್ಣ ನಿಷೇಧವನ್ನು ತಕ್ಷಣವೇ ರದ್ದುಗೊಳಿಸಿ, ನಿಯಂತ್ರಿತ ವೇಳಾಪಟ್ಟಿಯೊಂದಿಗೆ ಸಾರ್ವಜನಿಕ ಸೇವೆಗಳನ್ನು ತಕ್ಷಣವೇ ಆರಂಭಿಸಲು ತುರ್ತು ನಿರ್ದೇಶನ ನೀಡಬೇಕು.ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್‌ ಅವರ ವಿರುದ್ಧ ಸಿಜೆಪಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಈ ಕಾನೂನು ಸಮರ ತೀವ್ರಗೊಂಡಿದ್ದು, ಸುಪ್ರೀಂ ಕೋರ್ಟ್‌ ಈ ನಿಂದನಾ ಅರ್ಜಿಯ ವಿಚಾರಣೆಯನ್ನು ಯಾವಾಗ ಕೈಗೆತ್ತಿಕೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

RELATED ARTICLES
spot_img

Latest News