Homeರಾಜ್ಯಔಷಧಿಗಳ ಮಾರಾಟ ಲಾಭಾಂಶದ ಮಿತಿ ವಿಧಿಸುವುದರಿಂದ ಜನರಿಗೆ 2.5 ಸಾವಿರ ಕೋಟಿ ರೂ.ಉಳಿತಾಯ : ಖಾದರ್‌

ಔಷಧಿಗಳ ಮಾರಾಟ ಲಾಭಾಂಶದ ಮಿತಿ ವಿಧಿಸುವುದರಿಂದ ಜನರಿಗೆ 2.5 ಸಾವಿರ ಕೋಟಿ ರೂ.ಉಳಿತಾಯ : ಖಾದರ್‌

ಬೆಂಗಳೂರು, ಅ.10- ಔಷಧಿಗಳ ಉತ್ಪಾದನೆ ಮತ್ತು ಮಾರಾಟದ ನಡುವಿನ ಲಾಭಾಂಶದ ನಡುವೆ ಮಿತಿ ವಿಧಿಸುವುದರಿಂದ ದೇಶದ ಜನ ಸಾಮಾನ್ಯರಿಗೆ ಸುಮಾರು 2.5 ಸಾವಿರ ಕೋಟಿ ರೂ.ಗಳಷ್ಟು ಹಣ ಉಳಿತಾಯವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ. ಅರೋಗ್ಯ ಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾನ್ಸರ್‌, ಮೂತ್ರಪಿಂಡ, ಹೃದ್ರೋಗ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಔಷಧಿಗಳ ಮಾರಾಟ ದರಪಟ್ಟಿ ನಿಗಧಿಯಾಗಿಲ್ಲ. ಹೀಗಾಗಿ ಮನಸ್ಸೋಇಚ್ಛೆ ದರ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದರು.

3 ಸಾವಿರ ರೂ. ಬೆಲೆಯ ಔಷಧಿ 27 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಇದಕ್ಕೆ ಶೇ.30ರಷ್ಟು ಲಾಭಾಂಶವನ್ನು ಮಿತಿಗೊಳಿಸಿದರೆ, 4,280 ರೂ.ಗಳಿಗೆ ಮಾರಾಟ ಮಾಡಲು ಸಾಧ್ಯ. ಗ್ರಾಹಕರಿಗೆ ಒಂದು ಔಷಧಿಯ ಮೇಲೆ 21 ಸಾವಿರ ರೂ. ಉಳಿತಾಯವಾಗುತ್ತದೆ. 5,500 ರೂ. ಬೆಲೆಯ ಔಷಧಿ 65 ಸಾವಿರ ರೂ.ಗಳಿಗೆ ಮಾರಾಟವಾಗುತ್ತಿದೆ. ಶೇ.30ರ ದರ ಎಂದಾದರೆ, 6,700 ರೂ.ಗೆ ದೊರೆಯಲಿದೆ. ಯಾವುದೇ ಔಷಧಿ ಶೇ.30ರಷ್ಟು ಲಾಭಾಂಶದ ಮಿತಿಯಲ್ಲಿ ಮಾರಾಟವಾಗಬೇಕೆಂಬ ನಿಯಮ ಇದೆ ಎಂದರು.

ಅದೇ ರೀತಿ ವೈದ್ಯಕೀಯ ಸಲಕರಣೆಗಳಿಗೆ 3 ಕೋಟಿಯಿಂದ 25 ಕೋಟಿ ರೂ.ಗಳವರೆಗೂ ಬೆಲೆ ಇದೆ. ಇದರ ದರದಲ್ಲೂ ಕಡಿವಾಣ ಹಾಕುವ ಅಗತ್ಯ ಇದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ನಮ ಅಧಿಕಾರಿಗಳು ನಿರಂತರವಾದ ಕಾರ್ಯಾಚರಣೆ ನಡೆಸಿ 253 ಔಷಧಿಗಳ ಉತ್ಪಾದನಾ ವೆಚ್ಚ ಮತ್ತು ಮಾರಾಟ ದರವನ್ನು ಪಟ್ಟಿ ಮಾಡಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ವೈದ್ಯಕೀಯ ಸಲಕರಣೆಗಳ ದರವನ್ನು ಕೂಡ ನಿಖರವಾಗಿ ಪಟ್ಟಿ ಮಾಡಿ ಮಾಹಿತಿ ಪ್ರಕಟಿಸಲಾಗುವುದು. ಇದರಿಂದ ಆಸ್ಪತ್ರೆಯವರು ಸಲಕರಣೆಗಳ ವೆಚ್ಚ ದುಬಾರಿ ಎಂದು ನೆಪ ಹೇಳಿ ಜನರಿಂದ ಹೆಚ್ಚುವರಿ ಶುಲ್ಕ ಮಾಡಲು ಅವಕಾಶ ಇಲ್ಲದಂತಾಗುತ್ತದೆ ಎಂದರು.

ಚಿಕಿತ್ಸಾ ವೆಚ್ಚ ಮಂಗಳೂರಿನಲ್ಲಿ ಒಂದು ರೀತಿ ಇದ್ದರೆ, ಬೆಂಗಳೂರಿನಲ್ಲಿ ಬೇರೆ ರೀತಿ ಇದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಕೆಪಿಎಂಇ ಆ್ಯಕ್ಟ್‌ಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ ಎಂದರು. ಆಯುಷಾನ್‌ ಭಾರತ್‌ ಸೇರಿದಂತೆ ಯಾವುದೇ ಸರ್ಕಾರಿ ವಿಮಾ ಯೋಜನೆಗಳ ಫಲಾನುಭವಿಗಳಿಗೆ ನಗದು ರಹಿತ ಚಿಕಿತ್ಸೆ ದೊರೆಯುವ ನಿಟ್ಟಿನಲ್ಲಿಯೂ ಚರ್ಚೆಗಳು ನಡೆಯುತಿವೆೆ. ನಿಯಮದಲ್ಲಿ ನಗದು ರಹಿತ ಚಿಕಿತ್ಸೆ ಎಂದು ಉಲ್ಲೇಖಿಸಲಾಗಿದೆ. ಆದರೆ ಆಸ್ಪತ್ರೆಗೆ ಒಮೆ ದಾಖಲಾದ ತಕ್ಷಣ ಇಲ್ಲಸಲ್ಲದ ನೆಪ ಹೇಳಿ ಹೆಚ್ಚುವರಿ ಹಣ ವಸೂಲಿ ಮಾಡುವುದು ಸಾಮಾನ್ಯವಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಿಂದಲೂ ಕಾನೂನು ತಿದ್ದುಪಡಿ ತರುತ್ತಿರುವುದಾಗಿ ಸಚಿವರು ತಿಳಿಸಿದರು.

ನಕಲಿ ಔಷಧಿಗಳ ಜಾಲ ಪತ್ತೆಗೆ ಸಂಬಂಧಪಟ್ಟಂತೆ ರಚಿಸಲಾಗಿರುವ ಎಸ್‌‍ಐಟಿ ಸಮಗ್ರ ತನಿಖೆ ನಡೆಸುತ್ತಿದೆ. ವರದಿ ಪೂರ್ಣಪ್ರಮಾಣದಲ್ಲಿ ಕೈ ಸೇರುವವರಿಗೂ ತಾಳೆಯಿಂದ ಇರುವಂತೆ ಅವರು ಮನವಿ ಮಾಡಿದರು. ಅಡುಗೆ ಎಣ್ಣೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿವಹಿಸಲಾಗಿದೆ. ಒಂದು ಕಡೆ ಚಿಕಿತ್ಸಾ ವೆಚ್ಚ ಕಡಿಮೆ ಮಾಡುವುದು ಸರ್ಕಾರದ ಆಧ್ಯತೆ. ಮತ್ತೊಂದೆಡೆ ಅನಾರೋಗ್ಯಕ್ಕೆ ಕಾರಣವಾಗುವ ಅಂಶಗಳನ್ನು ನಿಯಂತ್ರಿಸಲು ಆಹಾರ ಸುರಕ್ಷತಾ ಇಲಾಖೆ ಜಾಗೃತೆ ವಹಿಸಿದೆ ಎಂದು ತಿಳಿಸಿದರು.

ಈಗಾಗಲೇ ಉಪ್ಪು ಮತ್ತು ಸಕ್ಕರೆಯನ್ನು ಆರೋಗ್ಯಕರ ಪ್ರಮಾಣದಲ್ಲಿ ಜನರಿಗೆ ತಲುಪಿಸಲು ಕ್ರಮ ಕೈಗೊಂಡಿದ್ದೇವೆ. ಮುಂದಿನ ಹಂತದಲ್ಲಿ ಅಡುಗೆ ಎಣ್ಣೆ ಬಳಕೆಯಲ್ಲಿ ಅಪಾಯಕಾರಿ ಪರಿಸ್ಥಿತಿಯನ್ನು ತಡೆಯಲು ಚಿಂತನೆ ನಡೆದಿದೆ. ದೊಡ್ಡ ದೊಡ್ಡ ಹೋಟಲ್‌ಗಳಲ್ಲಿ ಒಮೆ ಬಳಸಿದ ಎಣ್ಣೆಯನ್ನು ಮಧ್ಯವರ್ತಿಗಳು ಖರೀದಿಸಿ, ರಿಫೈನ್‌ ಮಾಡಿ ಕಡಿಮೆ ಬೆಲೆಗೆ ಚಿಕ್ಕ ಚಿಕ್ಕ ಹೋಟೆಲ್‌ಗಳಿಗೆ ತಲುಪಿಸುತ್ತಿದ್ದಾರೆ. ಇದು ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆ ಖರೀದಿ ಮತ್ತು ಬಳಕೆಯ ಪ್ರಮಾಣದ ಬಗ್ಗೆ ಕರಾರುವಕ್ಕಾದ ಮಾಹಿತಿ ಕಲೆ ಹಾಕಲು ಪ್ರತ್ಯೇಕ ಆ್ಯಪ್‌ ರಚಿಸಲಾಗುತ್ತದೆ. ಅದನ್ನು ಆಧರಿಸಿ ಅಡುಗೆ ಎಣ್ಣೆಯ ಮೇಲೆ ನಿಗಾವಹಿಸಲಾಗುವುದು ಎಂದು ಹೇಳಿದರು.

RELATED ARTICLES
spot_img

Latest News