Homeರಾಜ್ಯಸಾಲು ಸಾಲು ರಜೆ ಹಾಗೂ ದಸರಾಗೆ ಕೆಎಸ್‌‍ಆರ್‌ಟಿಯಿಂದ 3000 ವಿಶೇಷ ಬಸ್‌‍ ವ್ಯವಸ್ಥೆ

ಸಾಲು ಸಾಲು ರಜೆ ಹಾಗೂ ದಸರಾಗೆ ಕೆಎಸ್‌‍ಆರ್‌ಟಿಯಿಂದ 3000 ವಿಶೇಷ ಬಸ್‌‍ ವ್ಯವಸ್ಥೆ

ಬೆಂಗಳೂರು,ಅ.10- ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರಿಗೆ ಬರುವ ಪ್ರವಾಸಿಗರ ಹಾಗೂ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮವು 3000 ವಿಶೇಷ ಬಸ್‌‍ ವ್ಯವಸ್ಥೆಯನ್ನು ಕಲ್ಪಿಸಲಿದೆ.

ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಕರ್ನಾಟಕ ಸಾರಿಗೆ, ರಾಜಹಂಸ, ಸ್ಲೀಪರ್‌, ಐರಾವತ, ಐರಾವತ ಕ್ಲಬ್‌ಕ್ಲಾಸ್‌‍ ಹಾಗೂ ಅಂಬಾರಿ ಕ್ಲಬ್‌ಕ್ಲಾಸ್‌‍, ಪಲ್ಲಕ್ಕಿ ಸ್ಲೀಪರ್‌, ಅಶ್ವಮೇಧ ಬಸ್‌‍ ಸೇವೆ ಜೊತೆಗೆ ಹೆಚ್ಚುವರಿಯಾಗಿ 3,000 ಬಸ್‌‍ಗಳ ವಿಶೇಷ ಸಾರಿಗೆ ಸೇವೆಯನ್ನು ಒದಗಿಸಲಿದೆ. ದಸರಾ ಹಿನ್ನೆಲೆಯಲ್ಲಿ ಅ.16ರಿಂದ ಅ.20ರವರೆಗೆ ಬೆಂಗಳೂರಿನಿಂದ ರಾಜ್ಯ, ಅಂತಾರಾಜ್ಯದ ವಿವಿಧ ಸ್ಥಳಗಳಿಗೆ ಈ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‌‍ಆರ್‌ಟಿಸಿ ತಿಳಿಸಿದೆ.

ಕೆಂಪೇಗೌಡ ಬಸ್‌‍ ನಿಲ್ದಾಣ, ಮೈಸೂರು ರಸ್ತೆ ಬಸ್‌‍ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್‌‍ ನಿಲ್ದಾಣದಿಂದ ವಿಶೇಷ ಬಸ್‌‍ಗಳ ಸೇವೆ ದೊರೆಯಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿಜಯನಗರ, ಯಶವಂತಪುರ, ಜಯನಗರ, ಬಸವೇಶ್ವರನಗರ, ದೊಮಲೂರು ಬನಶಂಕರಿ ಹಾಗೂ ಇತರಬಸ್‌‍ ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡಲಾಗುತ್ತದೆ.

ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ.20-21ರಂದು ಪ್ರಯಾಣಿಕರು ಮರಳಿ ಬರಲು ಅನುಕೂಲವಾಗುವಂತೆ ವಿಶೇಷ ಬಸ್‌‍ ಸೇವೆ ಕಲ್ಪಿಸಲಾಗುವುದು ಎಂದು ಕೆಎಸ್‌‍ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ಮಂಗಳೂರು, ಉಡುಪಿ, ಕುಂದಾಪುರ, ಪುತ್ತೂರು, ಧರ್ಮಸ್ಥಳ, ಕುಕ್ಕೆಸುಬ್ರಹಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳಲ್ಲಿನ ಹೈದರಾಬಾದ್‌, ವಿಜಯವಾಡ, ನೆಲ್ಲೂರು, ಚೆನ್ನೈ, ಊಟಿ, ಕೊಡೈಕೆನಾಲ್‌, ಸೇಲಂ, ತಿರುಚಿನಾಪಳ್ಳಿ, ಕುಂಭಕೋಣಂ, ಕೊಯಂಬತ್ತೂರು, ಮಧುರೈ, ಪಣಜಿ, ಮಂತ್ರಾಲಯ, ಪೂನಾ, ಎರ್ನಾಕುಲಂ, ಪಾಲಕ್ಕಾಡ್‌ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಬಸ್‌‍ ಸೇವೆ ಕಲ್ಪಿಸಲಾಗುತ್ತಿದೆ.

ಮೈಸೂರು ದಸರಾಗೆ 700 ವಿಶೇಷ ಬಸ್‌‍: ಮೈಸೂರು ರಸ್ತೆ ಬಸ್‌‍ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 300 ಹೆಚ್ಚುವರಿ ಬಸ್‌‍ಗಳು, ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಕೆ.ಆರ್‌.ಎಸ್‌‍.ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್‌.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್‌.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 400 ಹೆಚ್ಚುವರಿ ಬಸ್‌‍ಗಳನ್ನು ಒದಗಿಸಲಾಗುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್‌‍ ಮೂಲಕ ನೇರ ಬಸ್‌‍ ಸೇವೆ ದೊರೆಯಲಿವೆ ಎಂದು ಕೆಎಸ್‌‍ಆರ್‌ಟಿಸಿ ತಿಳಿಸಿದೆ.

RELATED ARTICLES
spot_img

Latest News