ಮೈಸೂರು,ಅ.13- ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಯುವ ದಸರಾ -2026ಕ್ಕೆ ಇಂದು ಸಂಜೆ ಚಾಲನೆ ದೊರೆಯಲಿದೆ. ನಗರದ ಉತ್ತನಹಳ್ಳಿ ರಿಂಗ್ ರಸ್ತೆಯಲ್ಲಿರುವ ಜ್ವಾಲಾಮುಖಿ, ತ್ರಿಪುರ ಸುಂದರಿ, ದೇವಾಲಯ ಸಮೀಪದ 14 ಎಕರೆ ಪ್ರದೇಶದಲ್ಲಿ ಇಂದಿನಿಂದ 17ರವರೆಗೆ 5 ದಿನಗಳ ಕಾಲ ಯುವ ದಸರಾ ಅದ್ಧೂರಿಯಾಗಿ ನಡೆಯಲಿದೆ ಎಂದು ಯುವ ದಸರಾ ಉಪಸಮಿತಿಯ ವಿಶೇಷ ಅಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಇಂದು ಸಂಜೆ 6.30ಕ್ಕೆ ನಡೆಯಲಿರುವ ಯುವ ದಸರಾ ಕಾರ್ಯಕ್ರಮಕ್ಕೆ ಖ್ಯಾತ ನಟ, ನೃತ್ಯ ನಿರ್ದೇಶಕ ಪ್ರಭುದೇವ್ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಯುವ ದಸರಾದ ವಿಶೇಷ ಆಕರ್ಷಣೆಯಾದ ಆಲ್ಬಂ ಸಾಂಗ್ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಸೋಮಶೇಖರ್ ಮತ್ತು ಮನೋಜ್ ಸೌಗಂಧ್ ಸಾಹಿತ್ಯಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಇಂದು ಸಂಜೆ ಉದ್ಘಾಟನೆ ಮತ್ತು ಅಜನೀಶ್ ಲೋಕನಾಥ್ ಲೈವ್ ಕಾರ್ಯಕ್ರಮ ಇರಲಿದ್ದು, ನಾಳೆ ಶಂಕರ್ ಎಹ್ಸಾನ್‌ಲಾಯ್ 15ರಂದು ಶ್ರೀರಾಮ್, 16ರಂದು ಸ್ಯಾಂಡಲ್‌ವುಡ್ ನೈಟ್‌್ಸ, 17ರಂದು ಜಾಸಿನ್ ಸ್ಯಾಂಡ್ಲಾಸ್ ಅವರಿಂದ ಆಕರ್ಷಕ ಕಾರ್ಯಕ್ರಮಗಳು ನಡೆಯಲಿವೆ. ಯುವ ದಸರಾ ಕೇವಲ ಸಂಗೀತ ಕಾರ್ಯಕ್ರಮವಲ್ಲ. ಯುವ ಪ್ರತಿಭೆಗಳ ಕಲೆ ಅನಾವರಣ, ಸಂಸ್ಕೃತಿಯನ್ನು ಬಿಂಬಿಸುವ ವೇದಿಕೆಯಾಗಿದೆ.
