ವೈಶಾಲಿ, ಅ. 14 – ಬಿಹಾರದ ವೈಶಾಲಿ ಜಿಲ್ಲೆಯ ಗಂಗಾ ನದಿಯಲ್ಲಿ ಸುಮಾರು 20 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿದ ಪರಿಣಾಮ ಕನಿಷ್ಠ ಪಕ್ಷ 13 ಮಕ್ಕಳು ಮೃತಪಟ್ಟಿದ್ದಾರೆ.ಮೃತರೆಲ್ಲರೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.
ವೈಶಾಲಿ ಜಿಲ್ಲಾಧಿಕಾರಿ ವರ್ಷಾ ಸಿಂಗ್ ಅವರ ಪ್ರಕಾರ, ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ರಾಘೋಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಸುಮಾರು 8.30ರ ವೇಳೆಗೆ ಘಟನೆ ಸಂಭವಿಸಿದೆ.
ರಾಮಪುರ ಶ್ಯಾಮಚಂದ್ ಗ್ರಾಮದ ನಿವಾಸಿಗಳು ಸೇರಿದಂತೆ ದೋಣಿಯಲ್ಲಿದ್ದ ಪ್ರಯಾಣಿಕರು, ಗಂಗಾ ನದಿಯ ಆಚೆಯ ಗ್ರಾಮವೊಂದರಲ್ಲಿ ನಡೆಯುತ್ತಿದ್ದ ಔತಣಕೂಟದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ದೋಣಿ ಮುಳುಗಿದೆ.
ದೋಣಿಯಲ್ಲಿ 15ರಿಂದ 20 ಮಂದಿ ಇದ್ದಿರಬಹುದು. ಅವರಲ್ಲಿ ಹೆಚ್ಚಿನವರು ಮಕ್ಕಳು ಎಂದು ಹೇಳಲಾಗಿದ್ದು, ನಿಖರವಾದ ಪ್ರಯಾಣಿಕರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ಈವರೆಗೆ 13 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸ್ಥಳೀಯ ಮುಳುಗು ತಜ್ಞರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈವರೆಗೆ ಏಳು ಮಕ್ಕಳನ್ನು ರಕ್ಷಿಸಲಾಗಿದ್ದು, ಅವರನ್ನು ಪಾಟ್ನಾದ ಎನ್ಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ 2 ಲಕ್ಷ ಪರಿಹಾರ ಘೋಷಿಸಿದ್ದು, ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50,000 ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ತಿಳಿಸಿದ್ದಾರೆ.
