ಬೆಂಗಳೂರು,ಅ.14- ದುಬೈನಿಂದ ವಿಮಾನದಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ನಾಲ್ವರು ಪ್ರಯಾಣಿಕರು ಕಸ್ಟಮ್ಸೌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು 2.6 ಕೋಟಿ ಮೌಲ್ಯದ 28 ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದಿದ್ದಾರೆ.
ಚೆನ್ನೈನ ರಂಜಾನ್ ಬೇಗಂ , ನಸ್ರಿನ್ ಬಾನು, ಹೈರುನ್ ಫಾತಿಮಾ ಮತ್ತು ಅಸಾರುದ್ದೀನ್ ಚೆಲ್ಲದುರೈ ಬಂಧಿತರು.ಈ ನಾಲ್ವರು ಪ್ರಯಾಣಿಕರು ತಮ ಪಾದಗಳ ಅಡಿ ಹಾಗೂ ಪಾದದ ಅಕ್ಕಪಕ್ಕದಲ್ಲಿ ಚಿನ್ನದ ಗಟ್ಟಿಗಳನ್ನು ಕಪ್ಪು ಟೇಪ್ನಿಂದ ಗಟ್ಟಿಯಾಗಿ ಸುತ್ತಿಕೊಂಡು ಬಂದಿದ್ದಾರೆ.
ವಿಮಾನ ನಿಲ್ದಾಣದಿಂದ ಇನ್ನೇನು ಹೊರಬೇಕು ಎನ್ನುವಷ್ಟರಲ್ಲಿ ಕಸ್ಟಮ್ಸೌ ಅಧಿಕಾರಿಗಳಿಗೆ ಗುಪ್ತಚರ ಮಾಹಿತಿ ಲಭಿಸಿದೆ. ತಕ್ಷಣ ಟರ್ಮಿನಲ್ 2ರ ನಿರ್ಗಮನ ದ್ವಾರದಲ್ಲಿ ಚೆನ್ನೈ ಮೂಲದ ಮೂರು ಮಹಿಳೆಯರು ಹಾಗೂ ವ್ಯಕ್ತಿಯೊಬ್ಬನನ್ನು ತಪಾಸಣೆ ನಡೆಸಿದಾಗ ಕಳ್ಳ ಸಾಗಾಣೆ ಮಾಡಿಕೊಂಡು ಬಂದಿದ್ದ ಸುಮಾರು 1.6 ಕೆಜಿ ತೂಕದ 28 ಚಿನ್ನದ ಗಟ್ಟಿಗಳು ಪತ್ತೆಯಾಗಿವೆ.
ಈ ಚಿನ್ನದ ಗಟ್ಟಿಗಳ ಮೌಲ್ಯ 2.6 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಆರೋಪಿಗಳಿಂದ 13 ನವೀಕರಿಸಿದ ಮೊಬೈಲ್ಗಳು ಹಾಗೂ ಎಂಟು ಲ್ಯಾಪ್ಟಾಪ್ಗಳನ್ನೂ ಸಹ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಈ ನಾಲ್ವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಅಕ್ರಮ ಚಿನ್ನ ಸಾಗಾಣೆ ಜಾಲದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬುವುದ ಬಗ್ಗೆ ತನಿಖೆ ಮುಂದುವರೆದಿದೆ.
