ಬೆಂಗಳೂರು,ಅ.29- ರಾಜ್ಯಾದ್ಯಂತ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ತಯಾರಿಕಾ ಘಟಕಗಳ ಮೇಲೆ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿರುವ ಬಿಸ್ಲೇರಿ ವಾಟರ್ ಕಂಪನಿಯ ಘಟಕದ ಮೇಲೂ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ.
ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಒಟ್ಟು 17 ಕಂಪನಿಗಳ ನೀರಿನ ಘಟಕಗಳನ್ನು ಪರಿಶೀಲಿಸಿದ್ದಾರೆ. ಈ ವಿಶೇಷ ಕಾರ್ಯಾಚರಣೆಗಾಗಿ ಆಹಾರ ಸುರಕ್ಷತಾ ಇಲಾಖೆಯ 23 ತಂಡಗಳನ್ನು ರಚಿಸಲಾಗಿದ್ದು, ಎರಡು ದಿನಗಳ ಕಾಲ ತಪಾಸಣೆ ಮುಂದುವರಿಯಲಿದೆ.
ಪ್ಯಾಕೇಜ್‌್ಡ ಕುಡಿಯುವ ನೀರಿನ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕಂಪನಿಗಳು ಅಗತ್ಯ ಪರವಾನಗಿ ಹಾಗೂ ನೋಂದಣಿ ಹೊಂದಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಘಟಕಗಳ ದಾಖಲೆಗಳು ಮತ್ತು ನಿಯಮಗಳ ಪಾಲನೆಗೆ ಸಂಬಂಧಿಸಿದ ಮಾಹಿತಿಗಳನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ.
ಯಾವೆಲ್ಲ ಘಟಕಗಳ ಮೇಲೆ ದಾಳಿ? ;
ಅಧಿಕಾರಿಗಳು ಪರಿಶೀಲಿಸಿದ ಘಟಕಗಳ ಪಟ್ಟಿಯಲ್ಲಿ ಬಿಸ್ಲೇರಿ ಇಂಟರ್‌ನ್ಯಾಷನಲ್ ಪ್ರೈ.ಲಿ., ಆಕ್ವಾಫೀನಾ, ಕಿನ್ಲೇ, ಎಸ್‌ಎಲ್‌ವಿ ಆಕ್ವಾ ಕಿಂಗ್, ಎಫ್‌ಎಂ ಆಕ್ವಾ, ಶಿವಲಿಂಗೇಶ್ವರ ಮಿನರಲ್‌್ಸ, ಮೌಂಟನ್ ಆಕ್ವಾ, ಶಿವಗಂಗಾ ಫುಡ್ ಆ್ಯಂಡ್ ಬೇವರೇಜಸ್ ಹಾಗೂ ನ್ಯೂಟ್ರೀ ಬೇವರೇಜಸ್ ಕಂಪನಿಗಳು ಸೇರಿವೆ.
ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು ಪೂರೈಕೆಯಾಗುವುದನ್ನು ಖಚಿತಪಡಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಲಭ್ಯ ಮಾಹಿತಿಯ ಪ್ರಕಾರ, ಒಟ್ಟು 17 ಕಂಪನಿಗಳ ಘಟಕಗಳನ್ನು ಪರಿಶೀಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
