ಬೆಂಗಳೂರು, ಇಡೀ ಜಗತ್ತು ಒಂದೇ ಕುಟುಂಬ ಅಂದರೆ ‘ವಸುಧೈವ ಕುಟುಂಬಕಮ್’ ಎಂಬ ಭಾರತದ ಪವಿತ್ರ ಸಂದೇಶ ಇಂದು ಯೋಗದ ಮೂಲಕ ಸಾಬೀತಾಗುತ್ತಿದೆ, ಯೋಗವು ಕೇವಲ ವ್ಯಾಯಾಮವಲ್ಲ, ಅದು ಮಾನವನ ಸಂಪೂರ್ಣ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಮಾರ್ಗವಾಗಿದೆ ಎಂದು ಆಚಾರ್ಯ ಮಹಾಮಂಡಲೇಶ್ವರ ಜಗದ್ಗುರು ಹೇಳಿದರು.
ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ಶಿಪ್-2026 ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಒಳ್ಳೆಯ ವಿಷಯಗಳು ಎಲ್ಲಿಂದ ಬಂದರೂ, ಯಾರೇ ಹೇಳಿದರೂ ಅದನ್ನು ಸ್ವೀಕರಿಸಬೇಕು. ‘ಸುಭಾಷಿತಂ ಬಾಲಮುಕಾಡಪಿ ಗ್ರಾಹ್ಯಮ್’ ಅಂದರೆ ಮಗುವಿನಿಂದ ಬಂದ ಒಳ್ಳೆಯ ಮಾತನ್ನೂ ಸ್ವೀಕರಿಸಬೇಕು ಅದೇ ರೀತಿ ಇಂದು ಯೋಗವನ್ನು ಇಡೀವಿಶ್ವ ಒಪ್ಪಿಕೊಂಡಿದೆ. ಜಗತ್ತು ಒಂದೇ ಕುಟುಂಬ ಅಂದರೆ ‘ವಸುಧೈವ ಕುಟುಂಬಕಮ್’ ಎಂಬ ಭಾರತದ ಪವಿತ್ರ ಸಂದೇಶವನ್ನು ನಾವೆಲ್ಲರೂ ಭೇದಭಾವ ಮತ್ತು ಸಂಕುಚಿತ ಮನೋಭಾವವನ್ನು ತೊರೆದು ಭಕ್ತಿ ಹಾಗೂ ಪ್ರೀತಿಯಿಂದ ಎಲ್ಲರನ್ನು ಅಪ್ಪಿಕೊಳ್ಳಬೇಕು ಎಂದರು.
ಇಂದಿನ ಕಾಲದಲ್ಲಿ ಕೇವಲ ಔಷಧಿ ಮತ್ತು ಮಾತ್ರೆಗಳಿಂದ 100 ವರ್ಷಗಳ ಕಾಲ ರೋಗಮುಕ್ತ ಹಾಗೂ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿಲ್ಲ. ರೋಗಗ್ರಸ್ತ ದೇಹದಿಂದ ನರಳುವ ಬದಲು ಋಷಿಮುನಿಗಳು ನಮಗೆ ಕೊಡುಗೆಯಾಗಿ ನೀಡಿದ ಯೋಗವನ್ನು ಅಳವಡಿಸಿಕೊಳ್ಳಬೇಕು. ತಲೆನೋವು, ಹೊಟ್ಟೆನೋವು, ಟೆನ್ಷನ್, ಬಿಪಿ, ಶುಗರ್ ಮುಂತಾದ ಪ್ರತಿಯೊಂದು ಸಮಸ್ಯೆಗೆ ಯೋಗದಲ್ಲಿ ಪರಿಹಾರವಿದೆ.
ವಿವಿಧ ರಾಜ್ಯಗಳ ಮಕ್ಕಳ ಸಾಂಸ್ಕೃತಿಕ ಸಮ್ಮಿಲನ:
ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಕೇರಳ, ಅಸ್ಸಾಂ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹಾಗೂ ಬೆಂಗಳೂರಿನಿಂದ ಬಂದಿದ್ದ ವಿದ್ಯಾರ್ಥಿಗಳು ನೀಡಿದ ಯೋಗ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ವಾಮೀಜಿಯವರು ಶ್ಲಾಘಿಸಿ, ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ ಕೋರಿದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಯುಎಇ ಯೋಗ ಸಮಿತಿ ಉಪಾಧ್ಯಕ್ಷರು ಅಹ್ಮದ್ ಇಬ್ರಾಹಿಂ, NYSF ಅಧ್ಯಕ್ಷರಾದ ಶಶಿಕಾಂತ್ ಜೈನ್, ಉಪಾಧ್ಯಕ್ಷ ರಮೇಶ್ ಸಿ. ಲೋಹನ್, ರಾಜೇಶ್ವರಿ ವಿದ್ಯಾಶಾಲೆ ಆಡಳಿತಾಧಿಕಾರಿ ಗೋಪಾಲನ್, ನಿವೃತ ಎಸಿಪಿ ಎನ್ ನಾರಾಯಣಸ್ವಾಮಿ, ಗೌತಮ್ ಸರ್ಕಾರ್, ನರಸಿಂಹರಾಜು, ಅವಿನಾಶ್ ಸೇರಿ ೧೫ ರಾಜ್ಯಗಳ ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
