ನವದೆಹಲಿ, ನ.3- ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಇಂದು ಜಮ್ಮು-ಕಾಶ್ಮೀರದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಶ್ರೀನಗರದ ಕನಿಷ್ಠ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.ಉಮರ್ ಆದಿಲ್ ದಾರ್ ಮತ್ತು ಆತನ ಸಹಚರರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾದ (ಎಲ್ಇಟಿ) ಓವರ್ಗ್ರೌಂಡ್ ವರ್ಕರ್ (ಒಜಿಡಬ್ಲ್ಯು) ಆಗಿ ಉಮರ್ ಆದಿಲ್ ದಾರ್ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಎಂಬ ಆರೋಪಗಳ ಕುರಿತು ಇ.ಡಿ. ತನಿಖೆ ನಡೆಸುತ್ತಿದೆ.
ದಾರ್ ಮತ್ತು ಆತನ ಸಹಚರರನ್ನು ಈ ಹಿಂದೆ ಗಣನೀಯ ಪ್ರಮಾಣದ ನಗದು ಹಣ ಹಾಗೂ ನಿಷೇಧಿತ ಸಂಘಟನೆಗೆ ಸಂಬಂಧಿಸಿದ ಆಕ್ಷೇಪಾರ್ಹ ಸಾಹಿತ್ಯದೊಂದಿಗೆ ಬಂಧಿಸಲಾಗಿತ್ತು ಎಂದು ಆರೋಪಿಸಲಾಗಿದೆ.ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಉಮರ್ ಆದಿಲ್ ದಾರ್ ಸುಮಾರು ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
