ಬಿಜಾಪುರ, ನ.6- ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಕಾರೆಗುಟ್ಟ ಬೆಟ್ಟಗಳ ಸಮೀಪ ಮಾವೋವಾದಿಗಳು ಹಿಂದೆ ಅಡಗಿಸಿಟ್ಟಿದ್ದ 711 ಬ್ಯಾರೆಲ್ ಗ್ರೆನೇಡ್ ಲಾಂಚರ್ (ಬಿಜಿಎಲ್) ಶೆಲ್ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು ಸದ್ಯಕ್ಕೆ ಈ ಪ್ರದೇಶಕ್ಕೆ ಭೇಟಿ ನೀಡದಂತೆ ಪೊಲೀಸ್ ಅಧಿಕಾರಿಯೊಬ್ಬರು ಮನವಿ ಮಾಡಿದ್ದಾರೆ.
ಛತ್ತೀಸ್ಗಢ ಮತ್ತು ತೆಲಂಗಾಣ ರಾಜ್ಯಗಳ ಗಡಿಯಲ್ಲಿರುವ ಕಾರೆಗುಟ್ಟ ಬೆಟ್ಟಗಳು ಈ ಹಿಂದೆ ಹಿರಿಯ ಮಾವೋವಾದಿ ನಾಯಕರ ಸುರಕ್ಷಿತ ಅಡಗುತಾಣವೆಂದು ಪರಿಗಣಿಸಲ್ಪಟ್ಟಿದ್ದವು. ಈ ವರ್ಷದ ಮಾರ್ಚ್ 31ರಂದು ಛತ್ತೀಸ್ಗಢವನ್ನು ಸಶಸ್ತ್ರ ಮಾವೋವಾದಿ ಚಟುವಟಿಕೆಗಳಿಂದ ಮುಕ್ತ ರಾಜ್ಯವೆಂದು ಘೋಷಿಸಲಾಗಿತ್ತು.
ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬಿಜಾಪುರ ಜಿಲ್ಲಾ ಪೊಲೀಸ್ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 196ನೇ ಬೆಟಾಲಿಯನ್ ಹಾಗೂ ಸಿಆರ್ಪಿಎಫ್ನ ವಿಶೇಷ ಕಮಾಂಡೋ ಘಟಕವಾದ ಕೋಬ್ರಾ ಪಡೆಯ 204ನೇ ಬೆಟಾಲಿಯನ್ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದವು.
ಉಸೂರ್ ಪೊಲೀಸ್ ಠಾಣಾ ವ್ಯಾಪ್ತಿಯ ತಡಪಲ್ಲಾ ಗ್ರಾಮದ ಭದ್ರತಾ ಪಡೆಗಳ ಫಾರ್ವರ್ಡ್ ಆಪರೇಟಿಂಗ್ ಬೇಸ್ (ಎಫ್ಒಬಿ) ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದಾಗ, ಕಾರೆಗುಟ್ಟ ಬೆಟ್ಟಗಳ ಸಮೀಪ ಮಾವೋವಾದಿಗಳು ಗುಪ್ತವಾಗಿ ಸಂಗ್ರಹಿಸಿಟ್ಟಿದ್ದ 711 ಬಿಜಿಎಲ್ ಶೆಲ್ಗಳು ಪತ್ತೆಯಾಗಿವೆ.
ನಿಗದಿತ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಅವುಗಳನ್ನು ಭದ್ರಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಿಜಿಎಲ್ ಶೆಲ್ಗಳು ಸ್ಫೋಟಕ ಸಾಮರ್ಥ್ಯ ಹೊಂದಿದ್ದು, ವಾಹನಗಳು ಮತ್ತು ಮೂಲಸೌಕರ್ಯಗಳಿಗೆ ಭಾರೀ ಹಾನಿ ಉಂಟುಮಾಡುವುದರ ಜತೆಗೆ ಪ್ರಾಣಾಪಾಯಕ್ಕೂ ಕಾರಣವಾಗಬಲ್ಲವು.
ಸಾರ್ವಜನಿಕರಿಗೆ ಎಚ್ಚರಿಕೆ:
ಕಾರೆಗುಟ್ಟ ಮತ್ತು ಸುತ್ತಮುತ್ತಲಿನ ಬೆಟ್ಟ ಪ್ರದೇಶಗಳಲ್ಲಿ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ) ಹಾಗೂ ಇತರ ಸ್ಫೋಟಕ ವಸ್ತುಗಳು ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಸಾರ್ವಜನಿಕರು ಸದ್ಯಕ್ಕೆ ಈ ಪ್ರದೇಶಗಳಿಗೆ ಭೇಟಿ ನೀಡಬಾರದು. ಯೋಜಿತ ಕಾರ್ಯಾಚರಣೆಯ ಭಾಗವಾಗಿ ಇಲ್ಲಿ ಸ್ಫೋಟಕ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ (ಡಿಮೈನಿಂಗ್) ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಎಚ್ಚರಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಾರೆಗುಟ್ಟ ಬೆಟ್ಟಗಳ ಸುತ್ತಮುತ್ತಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು 21 ದಿನಗಳ ಕಾಲ ಬೃಹತ್ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಕನಿಷ್ಠ 31 ಮಾವೋವಾದಿಗಳು ಹತರಾಗಿದ್ದರು. ಇದಲ್ಲದೆ, ಕಳೆದ ವರ್ಷ ನವೆಂಬರ್ನಲ್ಲಿ ಭದ್ರತಾ ಪಡೆಗಳು ಇದೇ ಪ್ರದೇಶದಲ್ಲಿ ಹೊಸ ಶಿಬಿರವನ್ನೂ ಸ್ಥಾಪಿಸಿದ್ದವು.
