ಬೆಂಗಳೂರು, ನ.8- ತೈಲ ಕಂಪನಿಗಳಿಂದ ಪೆಟ್ರೋಲ್, ಡೀಸೆಲ್ ಸರಬರಾಜಾಗುವ ಸ್ಥಳದಿಂದಲೇ ಶೇ.30ರಷ್ಟು ಎಥೆನಾಲ್ ಮಿಶ್ರಣವಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹಬ್ಬದ ದಿನ ಈ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ. ಸಚಿವರಿಗೆ ಏನು ಆದೇಶ ನೀಡಬೇಕೋ ಅದನ್ನು ನೀಡಿದ್ದೇನೆ. ಅವರು ಎಲ್ಲಾ ರೀತಿಯ ಮಾಹಿತಿ ಸಂಗ್ರಹಿಸಿದ್ದಾರೆ. ನಾಳೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಾರೆ ಎಂದರು.
ಕೇಂದ್ರ ಸರ್ಕಾರಕ್ಕೆ ತಿಳಿಸಿಯೇ 67 ಸ್ಯಾಂಪಲ್ ತೆಗೆದು ಪರೀಕ್ಷೆ ಮಾಡಿದ್ದೇವೆ. ಸಾವಿರಾರು ವಾಹನಗಳ ಮಾಲೀಕರಿಂದ ನಮಗೆ ದೂರುಗಳು ಬಂದಿವೆ. ವಾಹನಗಳು ಕೆಟ್ಟು ಹೋಗುತ್ತಿವೆ, ಮೈಲೇಜ್ ಡ್ರಾಪ್ ಆಗಿದೆ. ಎಂಜಿನ್ ಗಳು ಮಧ್ಯೆ ಮಧ್ಯೆ ನಿಲ್ಲುತ್ತಿವೆ ಎಂಬ ದೂರುಗಳಿವೆ. ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲೂ ಪರೀಕ್ಷೆ ನಡೆಸಿದೆ. ಪೆಟ್ರೋಲ್, ಡೀಸೆಲ್ನಲ್ಲಿ ಶೇ.30ರಷ್ಟು ಎಥೆನಾಲ್ ಮಿಶ್ರಣವಾಗುತ್ತಿದೆ. ಇದು ಅಪಾಯಕಾರಿ ಎಂದರು.
ಶೇ.30ರಷ್ಟು ಎಥೆನಾಲ್ ಸ್ಥಳೀಯ ಬಂಕ್ ಗಳಲ್ಲಿ ಮಿಶ್ರಣವಾಗುತ್ತಿಲ್ಲ. ತಪಾಸಣೆಯ ಮೂಲಕ ನಾವು ಇದನ್ನೂ ಖಚಿತ ಪಡಿಸಿಕೊಂಡಿದ್ದೇವೆ. ಪೆಟ್ರೋಲ್, ಡೀಸೆಲ್ ಎಲ್ಲಿಂದ ಹಂಚಿಕೆಯಾಗುತ್ತಿದೆಯೋ ಅಲ್ಲಿಂದಲೇ ಮಿಶ್ರಣವಾಗುತ್ತಿರುವ ಮಾಹಿತಿ ಸಚಿವರಿಗೆ ಸಿಕ್ಕಿದೆ ಎಂದರು.
ಕೇಂದ್ರ ಸರ್ಕಾರ ಎಥೆನಾಲ್ ಮಿಶ್ರಣಕ್ಕೂ ನಮಗೂ ಸಂಬಂಧ ಇಲ್ಲ ಎಂದು ನುಣಚಿಕೊಳ್ಳಬಹುದು. ಮಿತಿ ಮೀರಿ ಎಥೆನಾಲ್ ಮಿಶ್ರಣ ದೇಶವೇ ಆತಂಕ ಪಡುವ ವಿಚಾರ. ಕಡಿಮೆ ಬೆಲೆ ಎಥೆನಾಲ್ ಸಿಗುತ್ತದೆ. ಅದನ್ನು ಮಿಶ್ರಣ ಮಾಡುವುದರಿಂದ, ಹೆಚ್ಚು ಲಾಭ ಮಾಡಬಹುದು ಎಂಬ ಕಾರಣಕ್ಕೆ ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದು ಖಂಡನೀಯ. ಜನರನ್ನು ರಕ್ಷಿಸಬೇಕಾಗಿರುವುದು ಮತ್ತು ಜಾಗೃತಿ ಮೂಡಿಸಬೇಕಿರುವುದು ನಮ ಕರ್ತವ್ಯ. ಎಲ್ಲಾ ಮಾಹಿತಿಗಳನ್ನು ಜನರ ಮುಂದಿಡುತ್ತೇವೆ ಎಂದರು.
ಎಥೆನಾಲ್ ಅಕ್ರಮದ ಬಗ್ಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ನಾಯಕರ್ಯಾರು ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ದೀಪಾವಳಿ ಶುಭಾಶಯ:
ರಾಜ್ಯದ ಜನರ ಬದುಕು ಬೆಳಕಾಗಲಿ ಎಂದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಾರೈಸುವುದಾಗಿ ಹೇಳಿದ ಅವರು, ಇಂದು ತಾವು ತಾಯಿ ಹಾಸನಾಂಬೆ ದರ್ಶನಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.ರಾಜ್ಯ ಬಹಳ ಸಂಕಷ್ಟದಲ್ಲಿದೆ, ಬರಗಾಲ ಎದುರಿಸುತ್ತಿದ್ದೇವೆ. ಮಧ್ಯ ಮಧ್ಯೆ ಮಳೆ ಬರುತ್ತಿದೆ. ಆದರೆ ಅದರಿಂದ ರೈತರಿಗೆ ಸಮಾಧಾನವಾಗುತ್ತಿಲ್ಲ. ದೇವರು ಕಷ್ಟ ತೊಲಗಿಸುವ ಶಕ್ತಿ ನೀಡಲಿ. ಬೆಳಕು ಎಲ್ಲರ ಮನೆಯಲ್ಲೂ ಸದಾ ಇರಲಿ ಎಂದು ಹಾರೈಸಿದರು.
