Homeಜಿಲ್ಲಾ ಸುದ್ದಿಗಳುಅಡಿಕೆ ತೋಟದ ನೀರಿನ ತೊಟ್ಟಿಯಲ್ಲಿ ಇಬ್ಬರು ಕಾರ್ಮಿಕರ ಮೃತದೇಹ ಪತ್ತೆ

ಅಡಿಕೆ ತೋಟದ ನೀರಿನ ತೊಟ್ಟಿಯಲ್ಲಿ ಇಬ್ಬರು ಕಾರ್ಮಿಕರ ಮೃತದೇಹ ಪತ್ತೆ

ಚಿಕ್ಕಮಗಳೂರು, ನ.11- ಅಡಿಕೆ ತೋಟದ ಮನೆಯ ನೀರಿನ ತೊಟ್ಟಿಯಲ್ಲಿ ಇಬ್ಬರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿರುವ ಘಟನೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಆನಂದ್‌ (48) ಹಾಗೂ ಜುಂಜಾನಾಯ್‌ (65) ಎಂದು ಗುರುತಿಸಲಾಗಿದೆ.

ಅಮೃತಾಪುರ ಗ್ರಾಮದ ಮುರುಗೇಶ್‌ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಅಡಿಕೆ ಸುಲಿಯುವ ಕೆಲಸಕ್ಕಾಗಿ ಸೋಮವಾರ ಬೆಳಗ್ಗೆ ಇಬ್ಬರೂ ಕಾರ್ಮಿಕರು ತೆರಳಿದ್ದರು. ಆದರೆ, ಕೆಲ ಸಮಯದ ಬಳಿಕ ತೋಟದ ಮನೆಯ ನೀರಿನ ತೊಟ್ಟಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಇಬ್ಬರೂ ಆಕಸಿಕವಾಗಿ ಕಾಲು ಜಾರಿ ನೀರಿನ ತೊಟ್ಟಿಗೆ ಬಿದ್ದಿದ್ದಾರೆಯೇ, ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಸಾವಿನ ಹಿಂದೆ ಯಾವುದಾದರೂ ದುಷ್ಕೃತ್ಯ ಅಡಗಿದೆಯೇ ಎಂಬ ಹಲವು ಅನುಮಾನಗಳು ವ್ಯಕ್ತವಾಗಿವೆ. ಆದರೆ, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ತರೀಕೆರೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇಬ್ಬರು ಕಾರ್ಮಿಕರ ನಿಗೂಢ ಸಾವಿನ ಪ್ರಕರಣ ಗ್ರಾಮದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್‌‍ ತನಿಖೆಯಿಂದ ಸಾವಿನ ಹಿಂದಿನ ನೈಜ ಕಾರಣ ತಿಳಿದುಬರಬೇಕಿದೆ. ಈ ಸಂಬಂಧ ತರೀಕೆರೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

RELATED ARTICLES

Latest News