Homeರಾಜಕೀಯಸಚಿವ ಸಂಪುಟ ವಿಸ್ತರಣೆ ಜೊತೆಗೆ ಪುನರ್‌ರಚನೆಗೆ ಒತ್ತಡ, ಕೆಲ ಸಚಿವರಿಗೆ ಶುರುವಾಯ್ತು ಟೆನ್ಷನ್

ಸಚಿವ ಸಂಪುಟ ವಿಸ್ತರಣೆ ಜೊತೆಗೆ ಪುನರ್‌ರಚನೆಗೆ ಒತ್ತಡ, ಕೆಲ ಸಚಿವರಿಗೆ ಶುರುವಾಯ್ತು ಟೆನ್ಷನ್

ಬೆಂಗಳೂರು, ನ.17- ಸಚಿವ ಸಂಪುಟ ವಿಸ್ತರಣೆಯ ಜೊತೆಯಲ್ಲೇ ಪುನರ್‌ರಚನೆಯಾಗಬೇಕು ಎಂಬ ಒತ್ತಡ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹಲವು ಸಚಿವರಲ್ಲಿ ಆತಂಕ ಶುರುವಾಗಿದೆ. ಕೆಲ ಸಚಿವರು ಇಲಾಖೆಯ ಜವಾಬ್ದಾರಿ ನಿರ್ವಹಣೆ ಮಾಡುವುದಕ್ಕಿಂತಲೂ ಮಿಗಿಲಾಗಿ, ಗುಂಪುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ಅನ್ಯ ಪಕ್ಷಗಳತ್ತ ಮುಖ ಮಾಡಿದ್ದಾರೆ. ಅಂಥವರನ್ನು ಕೈ ಬಿಟ್ಟು ಪಕ್ಷ ನಿಷ್ಠರಿಗೆ ಮಣೆ ಹಾಕಲು ಚರ್ಚೆಗಳು ನಡೆಯುತ್ತಿವೆ.

ಒಂದು ವರ್ಷ 3 ತಿಂಗಳು ಮಾತ್ರ ಪ್ರಸ್ತುತ ವಿಧಾನ ಸಭೆಯ ಕಾಲಾವಧಿ ಇದೆ. ಈಗ ಸಚಿವರಾಗುವವರೆಗೆ ಅತಿ ಕಡಿಮೆ ಸಮಯ ದೊರೆಯುತ್ತದೆ. ಸಚಿವರನ್ನು ಈ ಹಂತದಲ್ಲಿ ಬದಲಾವಣೆ ಮಾಡುವುದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಚರ್ಚೆಗಳು ನಡೆಯುತ್ತಿವೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚುನಾವಣೆ ಸಂದರ್ಭಕ್ಕೆ ತಮದೇ ಆದ ತಂಡ ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಕೆಲವರನ್ನು ಕೈ ಬಿಡುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಸಂಪುಟ ಪುನರ್‌ ರಚನೆ ಸಲುವಾಗಿ ಖಾಲಿಯಿರುವ 2 ಸ್ಥಾನಗಳನ್ನು ಭರ್ತಿ ಮಾಡಲು ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ಸಂಪುಟದಿಂದ ಕೈಬಿಡುವವರ ಪಟ್ಟಿಯಲ್ಲಿ ಹೆಸರಿರುವ ಸಚಿವರು ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಕುರ್ಚಿ ಉಳಿವಿಗಾಗಿ ಕಸರತ್ತು ನಡೆಸಿದ್ದಾರೆ. ತಾವು ಇಲಾಖೆಯಲ್ಲಿ ಜಾರಿಗೊಳಿಸಿರುವ ಸುಧಾರಣ ಕ್ರಮಗಳು ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕುರಿತು ವರಿಷ್ಠ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಲಾಗುತ್ತದೆ.

ಕೆಲವು ಸಚಿವರಿಗಂತೂ ಚುನಾವಣೆಯ ಸಂದರ್ಭದಲ್ಲಿ ಹುದ್ದೆ ಕಳೆದುಕೊಳ್ಳಲು ಮನಸ್ಸಿಲ್ಲ. ಹೀಗಾಗಿ ಶತಾಯಗಥಾಯ ಸಚಿವರಾಗಿ ಮುಂದುವರಿಯಬೇಕೆಂಬ ಉಮೇದಿನಲ್ಲಿದ್ದಾರೆ. ಈವರೆಗೂ ಗುಂಪುಗಾರಿಕೆ ನಡೆಸುತ್ತಿದ್ದವರೂ ಏಕಾಏಕಿ ಬದಲಾಗಿದ್ದು, ಡಿ.ಕೆ.ಶಿವಕುಮಾರ್‌ ಅವರ ನಾಯಕತ್ವದಲ್ಲಿ ನಿಷ್ಠೆ ಪ್ರದರ್ಶಿಸಲಾರಂಭಿಸಿದ್ದಾರೆ.

ನಿನ್ನೆ ದೆಹಲಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಂಪುಟ ವಿಸ್ತರಣೆಯ ಬಗ್ಗೆ ವರಿಷ್ಠ ನಾಯಕರ ಜೊತೆ ಚರ್ಚೆ ನಡೆಸಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ ಬೆಂಗಳೂರಿನಲ್ಲಿ ಸರ್ಕಾರಿ ನಿವಾಸ ಗೃಹಪ್ರವೇಶ ಪೂಜೆ ಮಾಡಿದ ಮುಖ್ಯಮಂತ್ರಿಯವರು, ಅದರಲ್ಲಿ ರಾತ್ರಿ ತಂಗಬೇಕು ಎಂಬ ಕಾರಣಕ್ಕಾಗಿ ತರಾತುರಿಯಲ್ಲಿ ದೆಹಲಿಯಿಂದ ವಾಪಸ್‌‍ ಆಗಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮತ್ತೊಂದು ದಿನ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

Latest News