Homeಜಿಲ್ಲಾ ಸುದ್ದಿಗಳುಕಾಡಾನೆಗಳ ಸ್ಥಳಾಂತರ ಖಂಡಿಸಿ ಮೂಡಿಗೆರೆ ಬಂದ್‌

ಕಾಡಾನೆಗಳ ಸ್ಥಳಾಂತರ ಖಂಡಿಸಿ ಮೂಡಿಗೆರೆ ಬಂದ್‌

ಚಿಕ್ಕಮಗಳೂರು,ನ.25- ಕಾಡಾನೆಗಳು ಸ್ಥಳಾಂತರ ಕಾರ್ಯಾಚರಣೆ ವಿರೋಧಿಸಿ ಹಾಗೂ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿಂದು ಕರೆ ನೀಡಲಾಗಿದ್ದ ಮೂಡಿಗೆರೆ ಹಾಗೂ ಕೊಟ್ಟಿಗೆಹಾರ ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ. ಮೂಡಿಗೆರೆ ಪಟ್ಟಣದಲ್ಲಿ ಬೆಳಗ್ಗೆ 6 ರಿಂದಲೇ ಬಂದ್‌ ಬಿಸಿ ತಟ್ಟಿದ್ದು, ತುರ್ತುಸೇವೆ ಹೊರತುಪಡಿಸಿ ಅಂಗಡಿಮುಂಗಟ್ಟುಗಳು, ಹೋಟೆಲ್‌ಗಳು, ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು.

ಆನೆಗಳ ಕಾರ್ಯಾಚರಣೆ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಿದ ವಿವಿಧ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರು, ಸದಸ್ಯರು ಪ್ರವಾಸಿಮಂದಿರದಿಂದ ಬಸ್‌‍ ನಿಲ್ದಾಣದವರೆಗೆ ಪ್ರತಿಭಟನಾ ಜಾಥಾ ನಡೆಸಿ ತಮ ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಓಡಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಇದರಿಂದ ಮತ್ತೊಂದು ಪ್ರದೇಶದ ಜನರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಜನರ ಜೀವ ಮತ್ತು ಆಸ್ತಿ ರಕ್ಷಣೆಗೆ ಶಾಶ್ವತ ಪರಿಹಾರ ರೂಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮೂಡಿಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಅಪಾರ ಬೆಳೆಹಾನಿಯಾಗುತ್ತಿದೆ. ಜೊತೆಗೆ ಗ್ರಾಮಸ್ಥರಲ್ಲೂ ಕೂಡಾ ಆತಂಕ ಹೆಚ್ಚಾಗಿದೆ. ಕಾಡಾನೆಗಳ ಚಲನವಲನಕ್ಕೆ ಶಾಶ್ವತ ಕಡಿವಾಣ ಹಾಕುವ ಮೂಲಕ ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ದೀಪಕ್‌ ದೊಡ್ಡಯ್ಯ ಮಾತನಾಡಿ, ಕಾಡಾನೆಗಳ ಸಮಸ್ಯೆ ಇಂದು-ನಿನ್ನೆಯದಲ್ಲ. ಆನೆಗಳು ಕಾಡು ಬಿಟ್ಟು ನಾಡಿಗೆ ಏಕೆ ಬರುತ್ತಿವೆ ಎಂಬುದರ ಬಗ್ಗೆ ಮೊದಲು ಅಧ್ಯಯನ ಮಾಡಬೇಕು. ಕಾಡುಗಳಲ್ಲಿಯೇ ಅವುಗಳಿಗೆ ಸಾಕಷ್ಟು ಆಹಾರ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಿದರೆ ನಾಡಿನತ್ತ ಆನೆಗಳು ಬರುವುದಿಲ್ಲ. ಸ್ಥಳಾಂತರದಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದರು.

ಈಗಾಗಲೇ ಹಾಸನ ಜಿಲ್ಲೆಯಿಂದ ಮೂಡಿಗೆರೆ ತಾಲ್ಲೂಕಿನತ್ತ ಆನೆಗಳನ್ನು ಅಟ್ಟಿರುವ ಕ್ರಮದಿಂದ ಅಡಿಕೆ, ತೆಂಗು, ಬಾಳೆ, ಭತ್ತದ ಬೆಳೆ ನಾಶವಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಜೀವಕ್ಕೂ ಅಪಾಯ ಎದುರಾಗಿದೆ. ಸರ್ಕಾರ ನೀಡುವ ಪರಿಹಾರ ವೈಜ್ಞಾನಿಕವಾಗಿಲ್ಲ ಹಾಗೂ ಸಮರ್ಪಕವಾಗಿಲ್ಲ ಎಂದು ದೂರಿದರು.

ಮೂಡಿಗೆರೆ, ಗೋಣಿಬೀಡು ಸೇರಿದಂತೆ ಮತ್ತಿತರ ಸುತ್ತಮುತ್ತ ಗ್ರಾಮಗಳಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗಿದ್ದು, ಜನವಸತಿ ಪ್ರದೇಶದ ಸಮೀಪವೇ ಸಂಚರಿಸುತ್ತಿದ್ದು, ಇದರಲ್ಲಿ ಬೀಟಮ ಮತ್ತು ಓಲ್‌್ಡಬೆಲ್‌್ಟ ಗುಂಪಿಗೆ ಸೇರಿದ ಆನೆಗಳು ಇಂದು ಮೂಡಿಗೆರೆಯಲ್ಲಿ ಅವಾಂತರವನ್ನೇ ಸೃಷ್ಟಿ ಮಾಡಿದೆ. ಕಾಡುಪ್ರಾಣಿಗಳಿಂದ ಜೀವಹಾನಿಯಾದರೆ ಸರ್ಕಾರ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುತ್ತದೆ. ನಮಗೆ ಹಣ ಬೇಡ. ಕಾಡುಪ್ರಾಣಿಗಳಿಂದ ನಿಮದೇ ಜೀವನ ಹಾಳಾಗಿದ್ದು, ಯಾವ ತೊಂದರೆಯೂ ಆಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮೂಡಿಗೆರೆ ಹಾಗೂ ಕೊಟ್ಟಿಗೆಹಾರ ಬಂದ್‌ಗೆ ವರ್ತಕರು, ಸ್ಥಳೀಯರು, ರೈತರು, ರೈತ ಸಂಘಟಕರ ಮುಖಂಡರು ಸಾಥ್‌ ನೀಡಿದ್ದು, ಯಾವುದೇ ಕಾರಣಕ್ಕೂ ಮಲೆನಾಡಿನತ್ತ ಕಾಡಾನೆಗಳನ್ನು ಓಡಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

RELATED ARTICLES

Latest News