Homeರಾಜ್ಯಆನೆ ದಂತ ಕಳ್ಳಸಾಗಣೆ ಮಾಡುತ್ತಿದ್ದ ತಮಿಳುನಾಡು ಮೂಲದ ಮೂವರು ಬಂಧನ

ಆನೆ ದಂತ ಕಳ್ಳಸಾಗಣೆ ಮಾಡುತ್ತಿದ್ದ ತಮಿಳುನಾಡು ಮೂಲದ ಮೂವರು ಬಂಧನ

ಆನೇಕಲ್‌,ನ.29- ಆನೆ ದಂತ ಕಳ್ಳಸಾಗಣೆ ಜಾಲವನ್ನು ಬೇಧಿಸಿರುವ ಆನೇಕಲ್‌ ಠಾಣೆ ಪೊಲೀಸರು ತಮಿಳುನಾಡು ಮೂಲದ ಮೂವರನ್ನು ಬಂಧಿಸಿ ಏಳು ಆನೆ ದಂತಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ ಸತೀಶ್ವರನ್‌, ಶರತ್‌ ಕುಮಾರ್‌ ಹಾಗೂ ಶಂಕರ್‌ ಬಂಧಿತ ಆರೋಪಿಗಳು. ಆನೇಕಲ್‌ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುತ್ಯಾಲಮಡುವಿನ ಸಮೀಪ ಈ ಕಾರ್ಯಾಚರಣೆ ನಡೆಸಲಾಗಿದ್ದು, ಬಂಧಿತರಿಂದ ಸುಮಾರು 16 ಕೆ.ಜಿ. ತೂಕದ ಏಳು ಆನೆ ದಂತಗಳು, ಒಂದು ಕಾರು, ಮೊಬೈಲ್‌ ಫೋನ್‌ಗಳು ಹಾಗೂ ವನ್ಯಜೀವಿ ಬೇಟೆಗೆ ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆನೇಕಲ್‌ ಪೊಲೀಸ್‌‍ ಇನ್‌ಸ್ಪೆಕ್ಟರ್‌ ಪ್ರಕಾಶ್‌ ನೇತೃತ್ವದ ತಂಡಕ್ಕೆ ವನ್ಯಜೀವಿಗಳ ಬೇಟೆ, ಆನೆ ದಂತ ಹಾಗೂ ಜಿಂಕೆ ಮಾಂಸದ ಅಕ್ರಮ ಸಾಗಾಟದ ಕುರಿತು ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗಿತ್ತು. ತಮಿಳುನಾಡಿನಿಂದ ಬೆಂಗಳೂರಿಗೆ ಕಾರಿನಲ್ಲಿ ಆನೆ ದಂತಗಳನ್ನು ಮಾರಾಟ ಮಾಡಲು ಆರೋಪಿಗಳು ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು, ಮುತ್ಯಾಲಮಡುವಿನ ಸಮೀಪ ಕಾರು ಬರುತ್ತಿದ್ದಂತೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆನೇಕಲ್‌ ಪೊಲೀಸ್‌‍ ಠಾಣೆಯಲ್ಲಿ ತನಿಖೆ ಮುಂದುವರಿದಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ಆರು ದಿನಗಳ ಪೊಲೀಸ್‌‍ ಕಸ್ಟಡಿಗೆ ನೀಡಲಾಗಿದೆ. ಆನೆ ದಂತಗಳ ಅಕ್ರಮ ಮಾರಾಟ ಜಾಲ ಹಾಗೂ ವನ್ಯಜೀವಿ ಬೇಟೆಯ ಹಿಂದೆ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES

Latest News