ಮುಂಬೈ, ಏ. 28- ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೈಬರ್ ಸೆಲ್‌ನ ವಿಶೇಷ ತನಿಖಾ ತಂಡವು ಛತ್ತೀಸ್‌ಗಢದ ನಟ ಸಾಹಿಲ್ ಖಾನ್ ಅವರನ್ನು ಬಂಧಿಸಿದೆ.ಬಾಂಬೆ ಹೈಕೋರ್ಟ್‌ಗೆ ನಟ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಛತ್ತೀಸ್‌ಗಢದ ಜಗದಲ್‌ಪುರದಿಂದ ಅವರನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಕೆಲವು ಹಣಕಾಸು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ವಿವಾದಿತ ಮಹಾದೇವ್ ಬೆಟ್ಟಿಂಗ್ ಆ್ಯಪ್‌ನ ಪ್ರವರ್ತಕರ ನಡುವಿನ ಅಕ್ರಮ ವಹಿವಾಟಿನ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ.ಪ್ರಕರಣದಲ್ಲಿ ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ ಹಗರಣದ ಗಾತ್ರ ಸುಮಾರು 15,000 ಕೋಟಿ ರೂ ಎಂದು ಹೇಳಲಾಗಿದೆ.
ಖಾನ್ ಸೇರಿರಂತೆ ಇತರ 31 ವ್ಯಕ್ತಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆಯು ಅವರ ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಎಲ್ಲಾ ತಾಂತ್ರಿಕ ಸಾಧನಗಳನ್ನು ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಇಲ್ಲಿಯವರೆಗೆ ಒಬ್ಬರನ್ನು ಮಾತ್ರಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಬಂಧಿತ ನಟ ಸಾಹಿಲ್ ಖಾನ್ ಅವರನ್ನು ರಾಯಪುರ ಮಾರ್ಗವಾಗಿ ಮುಂಬೈಗೆ ಕರೆತರಲಾಗುತ್ತಿದೆ.ಇಂದೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.