ಬೆಂಗಳೂರು,ಫೆ.4-ಇಡ್ಲಿ, ವಡೆ, ದೋಸೆ ಸೇವನೆ, ರಾತ್ರಿಪೂರ್ತಿ ಅಲ್ಲಿಯೇ ನಿದ್ದೆ, ಸದನದೊಳಗೆ ಸದ್ದು ಮಾಡಿದ ಗೋವಿಂದ ಗೋವಿಂದ ಭಜನೆ, ಅಲ್ಲಿಯೇ ವಾಯುವಿಹಾರ ನಡೆಸಿದ ಶಾಸಕರು ಅಬಕಾರಿ ಲಂಚ ಪ್ರಕರಣದಲ್ಲಿ ಸಚಿವ ಆರ್.ಬಿ.ತಿಮಾಪುರ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳಾದ ಬಿಜೆಪಿ ಜೆಡಿಎಸ್ ಸದಸ್ಯರು ವಿಧಾನಸಭೆಯ ಸದನದೊಳಗೆ ಅಹೋರಾತ್ರಿ ನಡೆಸಿದ ಧರಣಿಯ ವೇಳೆ ಕಂಡು ಬಂದ ದೃಶ್ಯಗಳಿವು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಜೆಡಿಎಸ್ ಶಾಸಕಂಗ ಪಕ್ಷದ ನಾಯಕ ಸುರೇಶ್ ಬಾಬು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಧರಣಿಯನ್ನು ನಡೆಸಲಾಯಿತು. ಸಭಾಧ್ಯಕ್ಷರು ಸದನವನ್ನು ಮುಂದೂಡಿದರೂ ಸಹ, ಶಾಸಕರು ಸದನದಿಂದ ಹೊರಬರದೆ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಈ ವೇಳೆ ಶಾಸಕರು ಸದನದ ಒಳಗೆ ಜಾಗಟೆ ಬಾರಿಸುವ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಹಾಡುಗಳನ್ನು ಹಾಡಿ ಪ್ರತಿಭಟನೆ ನಡೆಸಿದರು. ಬಿಜೆಪಿ ಜೆಡಿಎಸ್ ಪಕ್ಷದ ಬಹುತೇಕ ಎಲ್ಲಾ ಶಾಸಕರು ಧರಣಿಯಲ್ಲಿ ಭಾಗವಹಿಸಿದ್ದರು. ಧರಣಿ ನಡೆಸಿದ ಶಾಸಕರಿಗೆ ಯು.ಟಿ.ಖಾದರ್ ಅವರು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಚಪಾತಿ ಪಲಾವ್ ಅನ್ನ ಸಾಂಬಾರು ತಿಂದ ಶಾಸಕರು ಸದನದಲ್ಲಿ ಮಲಗಿದರು. ಶಾಸಕರಿಗೆ ಬೇಕಾದ ತಲೆದಿಂಬು ಬೆಡ್ ಶೀಟ್ ಚಾಪೆ ಸೇರಿದಂತೆ ಇತರ ವ್ಯವಸ್ಥೆಯನ್ನು ಕಲ್ಪಿಸಿದರು. ಪ್ರತಿಭಟನೆಯಲ್ಲಿ, ಶಾಸಕರು ಜಾಗಟೆ ಬಾರಿಸಿ, ಹಾಡು ಹಾಡಿ ವಿಭಿನ್ನವಾಗಿ ತಮ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆ ಆವರಣದಲ್ಲೇ ರಾತ್ರಿ ಊಟ ಮಾಡಿ, ವಿಶ್ರಮಿಸುವ ಮೂಲಕ ಸರ್ಕಾರದ ವಿರುದ್ಧ ನಾಯಕರು ಕಿಡಿಕಾರಿದ ಪ್ರಸಂಗ ನಡೆಯಿತು. ವಿಧಾನಸೌಧದ ಒಳಭಾಗದಲ್ಲೇ ವಾಕ್ ಮಾಡಿದ ನಾಯಕರು. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಚಹಾ ಕುಡಿದು ವಾಯುವಿಹಾರ ಮುಗಿಸಿದರು. ಮೊಗಸಾಲೆ ಪ್ರವೇಶ ದ್ವಾರದಲ್ಲಿ ಕುಳಿತ ಸದಸ್ಯರು ತಮಟೆ ಬಾರಿಸಿ ಆಕ್ರೋಶ ಹೊರಹಾಕಿದರು.
ಕೋಟಿ ಕೋಟಿ ಲೂಟಿ, ರಾಜೀನಾಮೆ ಕೊಡಲೇಬೇಕು ಎಂದು ಹಾಡು ಹಾಡಿದರು. ಗೋವಿಂದ ಗೋವಿಂದ ಕೋಟಿ ಕೋಟಿ ಗೋವಿಂದ ಘೋಷಣೆ ಮೂಲಕ ವ್ಯಂಗ್ಯ ಮಾಡಿದರು. ನಂತರ ವಿಧಾನಸೌಧದ ಕಾರಿಡಾರ್‌ನಲ್ಲಿ ಹೆಜ್ಜೆ ಹಾಕಿ ಹಾಡನ್ನು ಹಾಡುವ ಮೂಲಕ ಪ್ರತಿಭಟಿಸಿದರು.
ರಾತ್ರಿ ವಿಧಾನಸೌಧದ ಮೊಗಸಾಲೆಗೆ ಹಾಸಿಗೆಗಳನ್ನು ತಂದು ಸದಸ್ಯರು ನಿದ್ದೆ ಮಾಡಿದರು.
ಇನ್ನು ನಿನ್ನೆ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಚಿವ ತಿಮಾಪುರ ಅವರು ಕೂಡಲೇ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದರು. ಗದ್ದಲ ಮತ್ತು ಘೋಷಣೆಗಳು ಮಿತಿಮೀರಿದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಲಾಪವನ್ನು ಕೆಲಕಾಲ ಮುಂದೂಡಿದರು.
ಆದರೆ, ಕಲಾಪ ಮುಂದೂಡಿದ ನಂತರವೂ ವಿರೋಧ ಪಕ್ಷದ ಸದಸ್ಯರು ಸದನದಿಂದ ಹೊರನಡೆಯಲು ನಿರಾಕರಿಸಿದರು. ಸಚಿವ ತಿಮಾಪುರ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಸದನದ ಬಾವಿಗಿಳಿದು ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದರು.
ಸಚಿವ ತಿಮಾಪುರ ಅವರ ಭ್ರಷ್ಟಾಚಾರಕ್ಕೆ ಸಾಕ್ಷ್ಯಗಳಿದ್ದರೂ ಸರ್ಕಾರ ಅವರನ್ನು ರಕ್ಷಿಸುತ್ತಿದೆ. ಹಗರಣದ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡುವವರೆಗೂ ನಮ ಹೋರಾಟ ನಿಲ್ಲದು ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದಾರೆ.
ಅಬಕಾರಿ ಇಲಾಖೆಯಲ್ಲಿ 6000 ಕೋಟಿ ರೂ. ಕಿಕ್ ಬ್ಯಾಕ್ ಆರೋಪ ಕೇಳಿ ಬಂದ ಹಿನ್ನೆಲೆ ಅಬಕಾರಿ ಸಚಿವ ಆರ್.ಬಿ. ತಿಮಾಪುರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು ಹಿಡಿದಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಹೂಡಿದೆ.
