ಬೆಂಗಳೂರು,ಫೆ.4-ಅಪ್ಪ- ಅಮ ಸಾರಿ….. ಎಂದು ಹಾಳೆಯಲ್ಲಿ ಬರೆದಿಟ್ಟು ಮನೆ ತೊರೆದು ಹೋಗಿದ್ದ ಇಬ್ಬರು ಮಕ್ಕಳು ಪೊಲೀಸರ ಸಮಯ ಪ್ರಜ್ಞೆಯಿಂದ ಪೋಷಕರ ಮಡಿಲಿಗೆ ಸೇರಿದ್ದಾರೆ.
ಮಾರತಳ್ಳಿಯ ಅಶ್ವಥ್ನಗರದಲ್ಲಿ ಮೂಲತಃ ಚಿತ್ರದುರ್ಗದ ದಂಪತಿ 13 ವರ್ಷದ ಮಗಳು ಹಾಗೂ 9 ವರ್ಷದ ಮಗನೊಂದಿಗೆ ವಾಸವಿದ್ದಾರೆ.
ಕೆಲಸದ ನಿಮಿತ್ತ ದಂಪತಿ ಚಿತ್ರದುರ್ಗಕ್ಕೆ ಹೋಗಿದ್ದಾರೆ. ಹಾಗಾಗಿ ಫೆ.1 ಎಂದು ಮಗಳಿಗೆ ದೂರವಾಣಿ ಕರೆ ಮಾಡಿ ಟ್ಯೂಷನ್ಗೆ ಹೋಗುವಂತೆ ಹೇಳಿದಾಗ ಇಬ್ಬರು ಮಕ್ಕಳು ಟ್ಯೂಷನ್ಗೆ ಹೋಗುವುದಿಲ್ಲ ಎಂದು ಹಠ ಮಾಡಿದಾಗ ಪೋಷಕರು ಬೈದಿದ್ದಾರೆ.
ಅಪ್ಪ-ಅಮ ಬೈದಿದ್ದಕ್ಕೆ ಸಿಟ್ಟಾದ ಮಗಳು ಹಾಳೆ ತೆಗೆದುಕೊಂಡು ಅಪ್ಪ-ಅಮ ಸಾರಿ ಎಂದು ಬರೆದಿಟ್ಟು ಬ್ಯಾಗ್ನಲ್ಲಿ ಬಟ್ಟೆ ತುಂಬಿಕೊಂಡಿದ್ದಲ್ಲದೇ ತನ್ನ ಆಧಾರ್ಕಾರ್ಡ್ ತೆಗೆದುಕೊಂಡು ಮೊಬೈಲ್ನ್ನು ಮನೆಯಲ್ಲೇ ಬಿಟ್ಟು ತಮನನ್ನು ಕರೆದುಕೊಂಡು ಅಂದು ಮಧ್ಯಾಹ್ನ 3 ಗಂಟೆಗೆ ಮನೆ ಬಾಗಿಲು ಹಾಕಿಕೊಂಡು ಹೋಗಿದ್ದಾಳೆ.
ಮನೆ ಸಮೀಪದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಹೋಗಿ ಬಸ್ ಹತ್ತಿಆಧಾರ್ಕಾರ್ಡ್ ತೋರಿಸಿ ಇಬ್ಬರು ಮೆಜೆಸ್ಟಿಕ್ಗೆ ಹೋಗಿದ್ದಾರೆ. ನಂತರ ಅಲ್ಲಿಂದ ಚಿತ್ರದುರ್ಗದ ಬಸ್ ಹತ್ತಿ ಹೋಗಿ ಬಳಿಕ ಅಲ್ಲಿಂದ ಭದ್ರಾವತಿ ಬಸ್ ಹತ್ತಿ ಹಲವೆಡೆ ಸುತ್ತಾಟ ನಡೆಸಿದ್ದಾರೆ.
ಇದ್ಯಾವುದರ ಅರಿವೇ ಇಲ್ಲದೇ ಕೆಲ ಸಮಯದ ಬಳಿಕ ಪೋಷಕರು ಮತ್ತೆ ಮೊಬೈಲ್ಗೆ ಕರೆ ಮಾಡಿದ್ದಾರೆ. ಆದರೆ ಮಕ್ಕಳು ಕರೆ ಸ್ವೀಕರಿಸಿಲ್ಲ. ಇದರಿಂದ ಗಾಬರಿಯಾದ ಬಾಲಕೀಯ ತಾಯಿ ತಮ ಮನೆಯ ಸಮೀಪದಲ್ಲೆ ವಾಸವಿರುವ ತನ್ನ ಸಹೋದರನಿಗೆ ಕರೆ ಮಾಡಿ ಮನೆ ಬಳಿ ಹೋಗಿ ನೋಡುವಂತೆ ತಿಳಿಸಿದ್ದಾರೆ.
ಅವರು ಮನೆಗೆ ಹೋಗಿ ನೋಡಿದಾಗ ಮಕ್ಕಳಿರಲಿಲ್ಲ. ಮೊಬೈಲ್ ರಿಂಗ್ ಆಗುತ್ತಲೇ ಇತ್ತು. ಮನೆಪೂರ್ತಿ ಹುಡುಕಾಡಿ ದಾಗ ಹಾಳೆಯೊಂದು ಕಣ್ಣಿಗೆ ಬಿದ್ದಿದೆ. ಅದು ಏನೆಂದು ನೋಡಿದಾಗ ಅದರಲ್ಲಿ ಅಪ್ಪ-ಅಮ ಸಾರಿ…. ಎಂದು ಬರೆದಿರುವುದು ಕಂಡು ಬಂದಿದೆ. ಇದರಿಂದ ಗಾಬರಿಯಾದ ಅವರು ತಕ್ಷಣ ಪೊಲೀಸರಿಗೆ ಮಕ್ಕಳು ಕಾಣೆಯಾಗಿರುವ ಬಗ್ಗೆ ದೂರು ನೀಡಿ ಹುಡುಕಿ ಕೊಡುವಂತೆ ಮಕ್ಕಳ ಫೋಟೋಗಳನ್ನು ಕೊಟ್ಟಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಹೆಚ್ಎಎಲ್ ಠಾಣೆ ಪೊಲೀಸರು ಮಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಮಾಹಿತಿ ಹಂಚಿಕೊಂಡಿದ್ದರು. ಈ ನಡುವೆ ಮಕ್ಕಳು ಭದ್ರಾವತಿಯ ಬಸ್ ನಿಲ್ದಾಣದಲ್ಲಿ ನಿಂತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಈ ಖಚಿತ ಮಾಹಿತಿ ಮೇರೆಗೆ ಬಸ್ ನಿಲ್ದಾಣದ ಬಳಿ ಹೋಗಿ ನೋಡಿದಾಗ ಕಾಣೆಯಾಗಿದ್ದ ಇಬ್ಬರು ಮಕ್ಕಳು ನಿಂತಿರುವುದು ಕಂಡು ಬಂದಿದೆ. ತಕ್ಷಣ ಅವರು ಮಕ್ಕಳನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ನಾವು ಬೆಂಗಳೂರಿನಿಂದ ಬಂದಿರುವುದಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಯಾವ ಪ್ರದೇಶದಲ್ಲಿ ವಾಸವಾಗಿದ್ದೀರಿ ಎಂದು ವಿಚಾರಿಸಿದಾಗ ಹೆಚ್ಎಎಲ್ ಎಂದು ತಿಳಿಸಿದ್ದಾರೆ.
ತಕ್ಷಣ ಅಲ್ಲಿನ ಪೊಲೀಸರು ಹೆಚ್ಎಎಲ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಈ ಮಾಹಿತಿ ಆಧರಿಸಿ ಹೆಚ್ಎಎಲ್ ಠಾಣೆ ಪೊಲೀಸರು ಅಲ್ಲಿಗೆ ತೆರಳಿ ಮಕ್ಕಳಿಬ್ಬರನ್ನು ನಗರಕ್ಕೆ ಕರೆ ತಂದು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ. ಮಕ್ಕಳು ಕಾಣೆಯಾದ ಕೆಲವೇ ಗಂಟೆಗಳಲ್ಲಿ ಮಕ್ಕಳನ್ನು ಪತ್ತೆಹಚ್ಚಿ ಕರೆತಂದ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
