ಬೆಂಗಳೂರು, ಆ.14- ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ನೇರವೇರಿಸಲು ಸಮಯ ಇಲ್ಲ ಎಂದು ಪತ್ರ ಬರೆದಿರುವ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಬಿಜೆಪಿ ಶಾಸಕರು ಆಗ್ರಹಿಸಿ, ಸಭಾತ್ಯಾಗ ಮಾಡಿದರು.
ವಿಧಾನಸಭೆಯಲ್ಲಿಂದು ಬಿಜೆಪಿಯ ವಿ.ಸುನೀಲ್ ಕುಮಾರ್, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಮಯ ಇಲ್ಲ ಎಂದು ಒಬ್ಬ ಸಚಿವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಅದನ್ನು ಒಪ್ಪಿಕೊಂಡು ಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಲು ಸಮಯ ಇಲ್ಲ ಎನ್ನುವ ಸಚಿವರನ್ನು ಸಂಪುಟದಲ್ಲಿ ಉಳಿಸಿಕೊಳ್ಳುವ ಅಗತ್ಯ ಏನು ಎಂದು ಖಾರವಾಗಿ ಪ್ರಶ್ನಿಸಿದರು.
ಇದಕ್ಕೆ ಡಾ.ಸಿ.ಎನ್.ಅಶ್ವಥ ನಾರಾಯಣ ಹಾಗೂ ಮತ್ತಿತರರು ಧ್ವನಿಗೂಡಿದರು.ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಪತ್ರವನ್ನು ನೀವು ಅರ್ಥೈಸಿಕೊಂಡಿರುವ ರೀತಿ ಸರಿ ಇಲ್ಲ. ತಮಗೆ ನೀಡಿರುವ ಜಿಲ್ಲೆಯ ಉಸ್ತುವಾರಿ ಬದಲು ಬೇರೆ ಜಿಲ್ಲೆಯ ಉಸ್ತುವಾರಿ ನೀಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಅದರ ಅರ್ಥ ಅವರು ರಾಷ್ಟ್ರಧ್ವಜಾರೋಹಣಕ್ಕೆ ಹೋಗುವುದಿಲ್ಲ ಎಂದು ಹೇಳಿಲ್ಲ.
ಆರೋಗ್ಯ ಸಮಸ್ಯೆ ಇರುವ ಕಾರಣಕ್ಕೆ ಬದಲಾವಣೆ ಕೇಳಿದ್ದಾರೆ. ಮುಖ್ಯಮಂತ್ರಿ ಅದಕ್ಕೆ ಸಮ್ಮತಿಸಿ, ಬದಲಾವಣೆ ಮಾಡಿದ್ದಾರೆ. ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿದೆ, ಜಿಲ್ಲೆಯಲ್ಲಿ ಧ್ವಜಾರೋಹಣವನ್ನಂತೂ ನಿಲ್ಲಿಸಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿದೆ ಎಂದು ಸಮರ್ಥಿಸಿಕೊಂಡರು.
ಆಡಳಿತ ಪಕ್ಷದ ಶಾಸಕ ಹೆಚ್.ಡಿ.ರಂಗನಾಥ್, ವಿರೋಧ ಪಕ್ಷದವರು ಎಲ್ಲಾ ವಿಚಾರಗಳಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಸಚಿವರು ತಮ್ಮ ವೈಯಕ್ತಿಕ ಸಮಸ್ಯೆ ಕಾರಣಕ್ಕೆ ಬದಲಾವಣೆ ಕೇಳಿದ್ದಾರೆ. ಅದನ್ನು ದೊಡ್ಡದು ಮಾಡುವ ಅಗತ್ಯ ಇಲ್ಲ ಎಂದರು. ಇದಕ್ಕೆ ಆಡಳಿತ ಪಕ್ಷದ ಕೆಲ ಶಾಸಕರು ಧ್ವನಿಗೂಡಿಸಿದರು.
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಬಿಜೆಪಿಯ ಡಾ.ಸಿ.ಎನ್.ಅಶ್ವಥ ನಾರಾಯಣ ಸೇರಿದಂತೆ ಮತ್ತಿತರರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ, ಧ್ವಜಾರೋಣಕ್ಕೆ ಪರ್ಯಾಯ ವ್ಯವಸ್ಥೆ ಮಾಡುವ ಬದಲು ಸಚಿವರನ್ನೇ ಬದಲಾವಣೆ ಮಾಡಿ ಎಂದು ಒತ್ತಾಯಿಸಿದರು.
ಸಚಿವರ ಇಂತಹ ಮಾನಸಿಕತೆಯನ್ನೂ ಸರ್ಕಾರ ಸಮರ್ಥಿಸಿಕೊಳ್ಳುವುದು ಸರಿಯಲ್ಲ. ನಿಮಗೆ ಸರಿಯಾಗಿ ಉತ್ತರ ನೀಡಲು ಆಗುತ್ತಿಲ್ಲ ಎಂದು ಅಶ್ವಥ ನಾರಾಯಣ ಹೇಳಿದಾಗ, ಉಪಮುಖ್ಯಮಂತ್ರಿ ಪರಮೇಶ್ವರ್, ಆಡಳಿತಾತ್ಮಕ ವಿಚಾರಗಳನ್ನು ನಮಗೆ ಬಿಡಿ ಎಂದು ಏರಿದ ಧ್ವನಿಯಲ್ಲೇ ತಿರುಗೇಟು ನೀಡಿದರು. ಇದು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕಾವೇರಿದ ಚರ್ಚೆಗೆ ಕಾರಣವಾಗಿತ್ತು.
ಸಭಾಧ್ಯಕ್ಷ ಜಿ.ಎಸ್.ಪಾಟೀಲ್, ವಿರೋಧ ಪಕ್ಷಗಳು ಪ್ರಸ್ತಾಪಿಸಿದ್ದು ಸರಿ, ಆದರೆ ಅದಕ್ಕೂ ಮೊದಲು ನೋಟಿಸ್ ನೀಡಬೇಕಿತ್ತು. ನಿಯಮ ಬದ್ಧವಾಗಿಲ್ಲದೆ ಏಕಾಏಕಿ ಚರ್ಚೆ ಮಾಡುವುದು ಸರಿಯಲ್ಲ ಎಂದರು. ಸರ್ಕಾರದ ಧೋರಣೆಯನ್ನು ವಿರೋಧಿಸಿ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
