Homeರಾಜ್ಯದ್ವೇಷ ರಾಜಕಾರಣ ಇಲ್ಲ, ಅಭಿವೃದ್ಧಿಗೆ ಪಣ : ಸಿಎಂ ಡಿಕೆಶಿ ಭರವಸೆ

ದ್ವೇಷ ರಾಜಕಾರಣ ಇಲ್ಲ, ಅಭಿವೃದ್ಧಿಗೆ ಪಣ : ಸಿಎಂ ಡಿಕೆಶಿ ಭರವಸೆ

ಬೆಂಗಳೂರು, ಆ.14- ಮುಖ್ಯಮಂತ್ರಿ ಅಧಿಕಾರ ವನ್ನು ದ್ವೇಷ ರಾಜಕಾರಣಕ್ಕೆ ಬಳಸಿಕೊಳ್ಳದೆ, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಎಲ್ಲ ಶಾಸಕರನ್ನೂ ಒಂದೇ ಭಾವನೆಯಿಂದ ವಿಶ್ವಾಸಕ್ಕೆ ತೆಗೆದುಕೊಂಡು ಟೀಂ ಕರ್ನಾಟಕವಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದರು.

ವಿಧಾನಸಭೆ ಕಲಾಪದ ಆರಂಭದಲ್ಲಿ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸುವ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕಾಂಗ್ರೆಸ್‌‍ ಹೈಕಮಾಂಡ್‌ ನಾಯಕರು 139 ಶಾಸಕರ ಬೆಂಬಲದೊಂದಿಗೆ ತಮನ್ನು ಮುಖ್ಯಮಂತ್ರಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಸುಮಾರು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಅವರೊಂದಿಗೆ ತಾವು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂದರು.

ಇದು ಹೊಸ ಸರ್ಕಾರ ಇರಬಹುದು, ಆದರೆ ಮುಂದುವರಿದ ಸರ್ಕಾರ. ಹೊಸ ಆಲೋಚನೆಗಳು ಮತ್ತು ಹೊಸ ಭರವಸೆಗಳೊಂದಿಗೆ ಜನರ ನಂಬಿಕೆ ಹಾಗೂ ವಿಶ್ವಾಸ ಗಳಿಸುವತ್ತ ಹೆಜ್ಜೆ ಇಡುತ್ತೇವೆ. ಸಚಿವರು ಮಾತ್ರವಲ್ಲ, ಎಲ್ಲ ಶಾಸಕರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಈಗ ಅವು ಮುಖ್ಯವಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವುದು ತಮ ಉದ್ದೇಶ ಎಂದು ಪದೇ ಪದೇ ಪುನರುಚ್ಚರಿಸಿದರು. ರಾಜ್ಯವನ್ನು ಮುನ್ನಡೆಸಿದ ಎಲ್ಲಾ ಮುಖ್ಯಮಂತ್ರಿಗಳನ್ನು ಸರಿಸಿದ ಡಿ.ಕೆ. ಶಿವಕುಮಾರ್‌, ಪ್ರತಿಯೊಬ್ಬರೂ ನಾಡಿನ ಅಭಿವೃದ್ಧಿಗೆ ತಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ನೀರಿನ ವಿಚಾರದಲ್ಲಿ ನೆರೆಯ ರಾಜ್ಯಗಳೊಂದಿಗೆ ನಾವು ಬಡಿದಾಡಿಕೊಳ್ಳುತ್ತಿದ್ದೇವೆ. ಹಿಂದೆ ಕೇವಲ ಎರಡು ಕೆರೆಗಳಿಂದ ಬೆಂಗಳೂರಿಗೆ ನೀರು ಪೂರೈಕೆಯಾಗುತ್ತಿತ್ತು. ಇದೀಗ ಕಾವೇರಿ ಮಾತೆ ಬೆಂಗಳೂರಿಗೆ ಸಾಕಷ್ಟು ನೀರು ನೀಡುತ್ತಿದ್ದಾಳೆ ಎಂದು ಹೇಳಿದರು.

ಬೆಂಗಳೂರು ಜಾಗತಿಕ ನಗರವಾಗಿ ಬೆಳೆದಿದೆ. ಇಡೀ ವಿಶ್ವವೇ ಕರ್ನಾಟಕದ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ನಗರದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಿದೇಶಿಗರು ವೀಸಾ ಹೊಂದಿ ನೆಲೆಸಿದ್ದಾರೆ. 480ಕ್ಕೂ ಹೆಚ್ಚು ವಿದೇಶಿ ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಶಿಕ್ಷಣ, ಆರೋಗ್ಯ ಹಾಗೂ ಜ್ಞಾನದ ನಗರವಾಗಿ ರೂಪುಗೊಂಡಿದೆ ಎಂದರು. ಇದೇ ರೀತಿಯಲ್ಲಿ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸಬೇಕಿದೆ. ಉಪನಗರಗಳು ಹಾಗೂ ಹೊರನಗರಗಳ ನಿರ್ಮಾಣದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಎಲ್ಲರ ಕೊಡುಗೆ ಸರಿಸಿದ ಶಿವಕುಮಾರ್‌:
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಇದೀಗ ಏನೇ ಟೀಕೆ ಮಾಡಬಹುದು. ಆದರೆ ಅವರು ಹಿಂದೆ ನೈಸ್‌‍ ರಸ್ತೆಗೆ ಸಹಿ ಮಾಡದೇ ಇದ್ದಿದ್ದರೆ ಬೆಂಗಳೂರಿನ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದ ಶಿವಕುಮಾರ್‌, ಎಚ್‌.ಡಿ. ಕುಮಾರಸ್ವಾಮಿ ಅವರು ಬಿಡದಿ ಉಪನಗರದ ಅಭಿವೃದ್ಧಿಗೆ ಉತ್ತಮ ಉದ್ದೇಶದಿಂದಲೇ ನಿರ್ಧಾರ ಕೈಗೊಂಡಿದ್ದರು. ಈಗ ಅವರು ಅದನ್ನು ವಿರೋಧಿಸುತ್ತಿದ್ದಾರೆ ಎಂದರು.

ನಾಡಿನ ಅಭಿವೃದ್ಧಿಗೆ ಎಲ್ಲರದ್ದೂ ಕೊಡುಗೆ ಇದೆ. ಸಿದ್ದರಾಮಯ್ಯ ಅವರು ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಹಲವು ಅನ್ನ ಭಾಗ್ಯ ಯೋಜನೆಗಳನ್ನು ಜಾರಿಗೆ ತಂದರು. ಎಸ್‌‍.ಎಂ. ಕೃಷ್ಣ ಅವರು ಬೆಂಗಳೂರನ್ನು ಐಟಿ ನಗರವಾಗಿ ರೂಪಿಸುವ ಕಾರ್ಯಕ್ಕೆ ಅಡಿಪಾಯ ಹಾಕಿದರು ಎಂದು ಹೇಳಿದರು. ವಿಧಾನಸಭೆ ಅಧ್ಯಕ್ಷರ ಚುನಾವಣೆಯನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿರುವುದು ಸರಿಯಲ್ಲ ಎಂದು ಇದೇ ವೇಳೆ ಡಿ.ಕೆ. ಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದರು.

25 ವರ್ಷಗಳಲ್ಲಿ ಹಸಿರು ಕರ್ನಾಟಕ ಗುರಿ:
ಮುಂದಿನ 25 ವರ್ಷಗಳಲ್ಲಿ ಕರ್ನಾಟಕವನ್ನು ಹಸಿರು ನಾಡನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರೈತರೊಂದಿಗೆ ಸೇರಿ ಹೊಸ ಯೋಜನೆ ರೂಪಿಸಲಾಗುವುದು. ವಿವಿಧ ಮೂಲಗಳ ಮೂಲಕ ಕರ್ನಾಟಕವನ್ನು ಪರ್ಯಾಯ ಆರ್ಥಿಕ ಕೇಂದ್ರವನ್ನಾಗಿ ನಿರ್ಮಿಸುವ ಗುರಿ ಹೊಂದಲಾಗಿದೆ. ಸ್ವಾವಲಂಬನೆ ಮತ್ತು ಸಮೃದ್ಧಿಯ ನಾಡಾಗಿ ಕರ್ನಾಟಕವನ್ನು ರೂಪಿಸಬೇಕು. ತೆರಿಗೆ ಪಾವತಿಸದಿರುವ ಮಟ್ಟಿಗೆ ಸ್ವಾವಲಂಬನೆ ಮಾಡಬೇಕಿದೆ ಎಂದರು.

ಸಾಮಾಜಿಕ ಹೊಣೆಗಾರಿಕೆ ನಿಧಿಯ ಸುಮಾರು 10 ಸಾವಿರ ಕೋಟಿ ರೂಪಾಯಿಗಳ ಮೊತ್ತವನ್ನು ಬಳಸಿಕೊಂಡು ಗ್ರಾಮೀಣ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಬೆಂಗಳೂರಿನಲ್ಲಿ ಸುಮಾರು 1.50 ಕೋಟಿ ಜನಸಂಖ್ಯೆ ಇದ್ದು, ಕಾನೂನು ಸುವ್ಯವಸ್ಥೆಗೆ ಒಂದು ಪೊಲೀಸ್‌‍ ಆಯುಕ್ತಾಲಯವಿದೆ. ನಗರದ ಭದ್ರತೆಗೆ ಇನ್ನಷ್ಟು ಹೆಚ್ಚಿನ ಆದ್ಯತೆ ನೀಡಲಾಗುವುದು. ಕರ್ನಾಟಕವನ್ನು ಮಾದಕ ವಸ್ತು ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡುವುದು ಸರ್ಕಾರದ ಗುರಿ ಎಂದರು.

ಅಧಿಕಾರ ಶಾಶ್ವತವಲ್ಲ:
ಅಧಿಕಾರ ದುರುಪಯೋಗಪಡಿಸಿಕೊಂಡು ಯಾರಿಗೂ ತೊಂದರೆ ನೀಡುವುದು ನಮ್ಮ ಉದ್ದೇಶವಲ್ಲ. ನನಗೆ ಫುಟ್ಬಾಲ್‌ ಆಡಲು ಬರುವುದಿಲ್ಲ, ಆದರೆ ಚೆಸ್‌‍ ಚೆನ್ನಾಗಿ ಆಡುತ್ತೇನೆ. ರಾಜಕಾರಣ ಗೊತ್ತಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರವನ್ನು ಸರಿಯಾಗಿ ಹಾಗೂ ಜವಾಬ್ದಾರಿಯುತವಾಗಿ ಬಳಸಿಕೊಳ್ಳುವುದು ನನ್ನ ಉದ್ದೇಶ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಹೃದಯ ಶ್ರೀಮಂತಿಕೆಯಿಂದ ರಾಜ್ಯದ ಜನರಿಗೆ ಸ್ಪಂದಿಸುವುದು ತಮ ಗುರಿ. ಇದಕ್ಕಾಗಿ ಕೇಂದ್ರ ಸಚಿವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ 25 ಸಾವಿರ ಜನರಿಗೆ ಉದ್ಯೋಗ ಸಿಗುವಂತಹ ಬೃಹತ್‌ ಕೈಗಾರಿಕೆಗಳನ್ನು ತರಲಿ. ಅವರು ಕೈಗಾರಿಕೆ ಸ್ಥಾಪನೆಗೆ ಎಲ್ಲಿ ಜಮೀನು ಕೇಳಿದರೂ ರಾಜ್ಯ ಸರ್ಕಾರ ಜಮೀನು ಒದಗಿಸಲಿದೆ ಎಂದು ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದರು.

RELATED ARTICLES
spot_img

Latest News