ಬೆಂಗಳೂರು,ಫೆ.4- ವಿಧಾನಸಭೆಯಲ್ಲಿಂದು ಆಡಳಿತ ಪಕ್ಷದ ಶಾಸಕ ಕೆ.ಎಂ.ಶಿವಲಿಂಗೇಗೌಡ, ವಿರೋಧ ಪಕ್ಷದ ಶಾಸಕರುಗಳನ್ನು ಉದ್ದೇಶಿಸಿ ಏಕವಚನದಲ್ಲಿ, ಅಸಂಸದಿಯ ಪದಗಳಲ್ಲಿ ತರಾಟೆಗೆ ತೆಗೆದುಕೊಂಡರು.
ಮಹಾತ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಮರು ಸ್ಥಾಪಿಸಬೇಕು. ವಿಬಿ ಜಿ ರಾಮ್ ಜಿ ಯೋಜನೆಯನ್ನು ರದ್ದು ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಸರ್ಕಾರದ ಅಧಿಕೃತ ನಿರ್ಣಯದ ಮೇಲಿನ ಚರ್ಚೆಯಲ್ಲಿ ಕೆ.ಎಂ.ಶಿವಲಿಂಗೇಗೌಡ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯಗಳ ಬಗ್ಗೆ ಶಿವಲಿಂಗೇಗೌಡ ವಿವರಿಸುತ್ತಿದ್ದರು. ಯೋಜನೆಗಳು ಹಳ್ಳಿಯಿಂದ ದೆಹಲಿಗೆ ಹೋಗಬೇಕು. ಆದರೆ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ದೆಹಲಿಯಿಂದ ಹಳ್ಳಿಗೆ ಯೋಜನೆ ಬರುವಂತಾಗಿದೆ. ರಾಜ್ಯ ಸರ್ಕಾರ ಶೇಕಡಾ 40ರಷ್ಟು ವೆಚ್ಚ ಭರಿಸಬೇಕು ಎಂಬ ನಿಯಮ ಸರಿಯಲ್ಲ ಎಂದರು.
ಈ ವೇಳೆಯಲ್ಲೇ ಅಬಕಾರಿ ಹಗರಣದಲ್ಲಿ ಸಚಿವ ಆರ್.ಬಿ.ತಿಮಾಪುರ ರಾಜೀನಾಮೆ ನೀಡಬೇಕೆಂದು ಅಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ನಡೆಸುತ್ತಿದ್ದರು. ಧರಣಿಯ ನಡುವೆ ಜೆಡಿಎಸ್, ಬಿಜೆಪಿ ಸದಸ್ಯರು ಏರಿದ ಧ್ವನಿಯಲ್ಲಿ ಘೋಷಣೆ ಕೂಗಿದರು.
ಇದರಿಂದ ಸಿಟ್ಟಾದ ಕೆ.ಎಂ.ಶಿವಲಿಂಗೇಗೌಡ, ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ. ವಿರೋಧ ಪಕ್ಷಗಳ ಸದಸ್ಯರು ಅದನ್ನು ಹಾಸ್ಯ ಮಾಡಿಕೊಂಡು ನೃತ್ಯ ಮಾಡುತ್ತಾ ಧರಣಿ ಮಾಡುತ್ತಿದ್ದಾರೆ. ಅವರಿಗೆ ಗಂಭೀರತೆ ಇಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಶಾಸಕ ಶರಣು ಸಲಗರ, ಜೆಡಿಎಸ್ ಪಕ್ಷಕ್ಕೆ ಕೈ ಕೊಟ್ಟ, ದೇವೇಗೌಡರಿಗೆ ಧೋಖಾ ಮಾಡಿದ, ಕೊಬ್ಬರಿ ಬೆಳೆಗಾರರಿಗೆ ಅನ್ಯಾಯ ಮಾಡಿದ ಶಿವಲಿಂಗೇಗೌಡ ಎಂದು ಧಿಕ್ಕಾರ ಕೂಗುವ ಮೂಲಕ ಪ್ರಚೋದಿಸಿದರು.
ಇದರಿಂದ ಕೆಂಡ ಮಂಡಲವಾದ ಶಿವಲಿಂಗೇಗೌಡರು, ಗಂಭೀರವಾದ ಚರ್ಚೆ ನಡೆಯುವಾಗ ಕೋತಿಗಳಂತೆ ಕುಣಿಯುತ್ತಿದ್ದಾರೆ. ಗಂಭೀರವಾಗಿ ಧರಣಿ ಮಾಡುತ್ತಿಲ್ಲ. ನಾನು ಯಾವಾಗಲಾದರೂ ಮಾತನಾಡಲು ನಿಂತರೆ, ಆರ್ ಎಸ್ ಎಸ್ ನ ಹಿನ್ನೆಲೆಯಿಂದ ಬಂದ ಬಿಜೆಪಿಯ ಮೂರು ನಾಲ್ಕು ಮಂದಿ ಶಾಸಕರು ಅಡ್ಡಿಪಡಿಸುತ್ತಾರೆ. ನಿಮ ಜನಕ್ಕೆ ಬೆಂಕಿ ಹಾಕ, ನಿಮಗೆ ಮಾನ ಮರ್ಯಾದೆ ಇಲ್ಲ. ಯೋಗ್ಯತೆ ಕೆಟ್ಟವರು ಎಂಬೆಲ್ಲಾ ಪದಗಳ ಪ್ರಯೋಗದ ಮೂಲಕ ಕಿಡಿಕಾರಿದರು.
ವಿರೋಧ ಪಕ್ಷದ ನಾಯಕ ಅಶೋಕ್, ತಮ ಶಾಸಕರನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು. ಶರಣು ಸಲವರ ಘೋಷಣೆ ಕೂಗುವುದನ್ನು ಮುಂದುವರಿಸಿದಾಗ, ಮತ್ತಷ್ಟು ರೋಷಾವೇಷಕ್ಕೆ ಒಳಗಾದ ಶಿವಲಿಂಗೇಗೌಡರು, ಹೆಂಡತಿಯನ್ನು ತಹಸೀಲ್ದಾರ್ ಮಾಡಿ ಭ್ರಷ್ಟಾಚಾರ ಮಾಡುತ್ತಿರುವ ಭ್ರಷ್ಟ ನೀನು ಎಂದು ಶರಣು ಸಲಗರ್ ವಿರುದ್ದ ವಾಗ್ದಾಳಿ ನಡೆಸಿದರು. ನಿನ್ನ ಅಪ್ಪನಿಗೆ ನಾನು ಕೈಕೊಟ್ಟಿದ್ದೇನೆಯೇ ಎಂದು ವಾಗ್ದಾಳಿ ನಡೆಸಿದರು. ಸಭಾಧ್ಯಕ್ಷರೇ ನನ್ನ ವಿರುದ್ಧ ವೈಯಕ್ತಿಕವಾಗಿ ದಾಳಿ ನಡೆಯುತ್ತಿದೆ ಎಂದು ದೂರು ನೀಡಿದರು.
ಮುಂದುವರೆದ ಶಿವಲಿಂಗೇಗೌಡರು ವಿರೋಧ ಪಕ್ಷದ ಸದಸ್ಯರತ್ತ ಬೆರಳು ಮಾಡಿ ನಿಮಂಥ ನೂರು ನಾಯಿಗಳು ಬಂದರೂ ನಾವು ಹೆದುರುವುದಿಲ್ಲ. ನಾಯಿಗಳು ನೀವು. ಏನೇ ಮಾಡಿದರೂ ಬಿಜೆಪಿಯವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ ಎಸ್ ಎಸ್ ನವರಿಗೆ ಕೂಗುವುದೇ ಬಂಡವಾಳ. ರಾಜ್ಯ ಸರ್ಕಾರ ರೂಪಿಸಿದ್ದ ದ್ವೇಷ ಭಾಷಣ ಪ್ರತಿಬಂಧಕ ಕಾನೂನಿಗೆ ರಾಜ್ಯಪಾಲರು ತಡೆ ಹಾಕಿದ್ದಾರೆ. ಇಲ್ಲವಾದರೆ ನಿಮಗೆಲ್ಲ ತಕ್ಕ ಪಾಠ ಕಲಿಸುತ್ತಿದ್ದೆ ಎಂದು ಶಿವಲಿಂಗೇಗೌಡ ಎಚ್ಚರಿಕೆ ನೀಡಿದರು.
ಶಿವಲಿಂಗೇ ಗೌಡರ ಟೀಕೆಯನ್ನು ಕಿವಿ ಮೇಲೆ ಹಾಕಿಕೊಳ್ಳದ ಬಿಜೆಪಿ-ಜೆಡಿಎಸ್ ಸದಸ್ಯರು ತಮ ಧಿಕ್ಕಾರ ಘೋಷಣೆಗಳನ್ನು ಮುಂದುವರೆಸಿದರು. ಒಂದು ಹಂತದಲ್ಲಿ ಶಿವಲಿಂಗೇಗೌಡ ಅವರು ಆಡಿರುವ ಮಾತುಗಳನ್ನು ಮನವರಿಕೆ ಮಾಡಿಕೊಂಡ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಆಡಳಿತ ಪಕ್ಷದ ಶಾಸಕರು ಮಾತನಾಡುವಾಗ ಅಸಂಸದೀಯ ಪದ ಬಳಕೆ ಮಾಡಿದ್ದಾರೆ. ನಾಯಿಗಳು, ಪೋಲಿಗಳು ಎಂದೆಲ್ಲ ಹೇಳಿದ್ದಾರೆ. ಅವರು ಸದನದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
