Thursday, April 16, 2026
Homeರಾಜ್ಯಸರ್ಕಾರ, ತನ್ನ ಹಠಮಾರಿ ಧೋರಣೆ ಬಿಟ್ಟು ಕೂಡಲೇ ಹೊಸ ಎಫ್‌ಎಫ್‌ಸಿ ರಚಿಸಬೇಕು : ಬಿಜೆಪಿ ಆಗ್ರಹ

ಸರ್ಕಾರ, ತನ್ನ ಹಠಮಾರಿ ಧೋರಣೆ ಬಿಟ್ಟು ಕೂಡಲೇ ಹೊಸ ಎಫ್‌ಎಫ್‌ಸಿ ರಚಿಸಬೇಕು : ಬಿಜೆಪಿ ಆಗ್ರಹ

The government should immediately form a new FFC: BJP demands

ಬೆಂಗಳೂರು,ಫೆ.8- ಜನರ ಹಿತಾಸಕ್ತಿಯನ್ನು ಬದಿಗಿಟ್ಟು ದರ ಏರಿಕೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌‍ ಸರ್ಕಾರ, ತನ್ನ ಹಠಮಾರಿ ಧೋರಣೆ ಬಿಟ್ಟು ಹೊಸ ಎಫ್‌ಎಫ್‌ಸಿ ರಚಿಸುವ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್‌ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು, ನಮ್ಮ ಮೆಟ್ರೋ ದರ ಏರಿಕೆ ಕುರಿತು ಜನರ ಮನವಿಗೆ ತ್ವರಿತವಾಗಿ ಸ್ಪಂದಿಸಿ, ತಾತ್ಕಾಲಿಕ ತಡೆ ನೀಡಿರುವ ಕೇಂದ್ರ ಸಚಿವರು ಹಾಗೂ ಅಧಿಕಾರಿಗಳಿಗೆ ರಾಜ್ಯದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಬೆಂಗಳೂರು ಮೆಟ್ರೋ ದರವನ್ನು ಅಸಮರ್ಥನೀಯವಾಗಿ ಏರಿಕೆ ಮಾಡಲು ಹೊರಟಿರುವ ರಾಜ್ಯ ಕಾಂಗ್ರೆಸ್‌‍ ಸರ್ಕಾರದ ನಿರ್ಧಾರಕ್ಕೆ ಸಂಬಂಧಪಟ್ಟಂತೆ ಇಂದು ನಾನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಮನೋಹರ್‌ ಲಾಲ್‌ ಖಟ್ಟರ್‌ ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘವಾಗಿ ಚರ್ಚೆ ನಡೆಸಿದೆ.

ಈಗಾಗಲೇ ಭಾರತದಲ್ಲೇ ಅತ್ಯಂತ ದುಬಾರಿ ಮೆಟ್ರೋ ದರವನ್ನು ಹೊಂದಿರುವ ಬೆಂಗಳೂರಿನಲ್ಲಿ, ಮತ್ತೊಂದು ದರ ಏರಿಕೆಯು ಲಕ್ಷಾಂತರ ನಾಗರಿಕರಿಗೆ ಹಾಗೂ ಸಾರ್ವಜನಿಕ ಸಾರಿಗೆಯನ್ನೇ ನಂಬಿಕೊಂಡಿರುವ ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನನ್ನ ಮನವಿಗೆ ಅತ್ಯಂತ ತ್ವರಿತವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಸೋಮವಾರದಿಂದ ಜಾರಿಗೆ ಬರಬೇಕಿದ್ದ ಪ್ರಸ್ತಾವಿತ ದರ ಏರಿಕೆಯನ್ನು ಸದ್ಯಕ್ಕೆ ತಡೆಹಿಡಿಯಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದರ ಜೊತೆಗೆ ದರ ನಿಗದಿ ಸಮಿತಿಯಲ್ಲಿನ ಲೋಪದೋಷಗಳ ಬಗ್ಗೆ ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿರುವ ಅವರು, ರಾಜ್ಯ ಸರ್ಕಾರ ವಿನಂತಿಸಿದರೆ ದರಗಳ ವೈಜ್ಞಾನಿಕ ಪರಿಷ್ಕರಣೆಗಾಗಿ ಹೊಸ ಸಮಿತಿಯನ್ನು ರಚಿಸುವ ಬಗ್ಗೆಯೂ ಸಕಾರಾತಕವಾಗಿ ಮಾತನಾಡಿದರು. ಪ್ರಯಾಣಿಕರ ಹಿತದೃಷ್ಟಿಯಿಂದ ಕೂಡಲೇ ಕಾರ್ಯಪ್ರವೃತ್ತರಾದ ಕೇಂದ್ರ ಸಚಿವರಿಗೆ ನಾನು ರಾಜ್ಯದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆಂದು ಹೇಳಿದ್ದಾರೆ.

ಈಗ ಪ್ರಶ್ನೆ ಇರುವುದು ರಾಜ್ಯ ಸರ್ಕಾರದ ಮುಂದೆ. ಜನರ ಹಿತಾಸಕ್ತಿಯನ್ನು ಬದಿಗಿಟ್ಟು ದರ ಏರಿಕೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌‍ ಸರ್ಕಾರ, ತನ್ನ ಹಠಮಾರಿ ಧೋರಣೆ ಬಿಟ್ಟು ಹೊಸ ಎಫ್‌ಎಫ್‌ಸಿ ರಚಿಸುವ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಮೆಟ್ರೋ ಪ್ರಯಾಣವು ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಕೈಗೆಟುಕುವ ದರದಲ್ಲಿ ಸಿಗುವವರೆಗೂ ಮತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ನಮ ಈ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News