ಬೆಂಗಳೂರು,ಫೆ.9- ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಹಾವಳಿ ತೀವ್ರಗೊಂಡಿದೆ. ಕಳೆದ 4 ವರ್ಷದಲ್ಲಿ 35 ಮಂದಿ ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಬಲಿಯಾಗಿದ್ದಾರೆ. ಆತಂಕಕಾರಿ ವಿಚಾರವೆಂದರೆ ಮಕ್ಕಳು, ವಿದ್ಯಾರ್ಥಿಗಳು ಕೂಡ ಆನ್‌ಲೈನ್ ಬೆಟ್ಟಿಂಗ್‌ನಿಂದ ಪ್ರಾಣ ಕಳೆದುಕೊಳ್ಳುವಂತಾಗಿದೆ.
ಕ್ರಿಕೆಟ್, ಫುಟ್‌ಬಾಲ್, ಟಿನ್ನಿಸ್, ಕುದುರೆ ರೇಸಿಂಗ್ ಮತ್ತು ಇ- ಸ್ಫೋರ್ಟ್‌್ಸಗಳಲ್ಲಿ ಹಣ ಹೂಡಲಾಗುತ್ತಿದೆ. ಅಲ್ಲದೆ ಕ್ಯಾಸಿನೊ ಆಟಗಳಾದ ಸ್ಲಾಟ್ ಮಷೀನ್‌ಗಳು, ಬ್ಲ್ಯಾಕ್‌ಜಾಕ್ ಮತ್ತು ಲೈವ್ ಕ್ಯಾಸಿನೋಗಳು ಇವೆ. ಇಷ್ಟೇ ಅಲ್ಲದೆ ಫ್ಯಾಂಟಸಿ ಗೇಮ್ಸೌ ಡ್ರೀಮ್ 11, ಎಂಪಿಎಲ್‌ನಂತಹ ಪ್ಲಾಟ್‌ಫಾರ್ಮ್‌ಗಳಿವೆ. ಜೊತೆಗೆ ಆನ್‌ಲೈನ್ ಪೊಕರ್, ರಮಿ, ಲಾಟರಿ ಆಟಗಳು ಇವೆ.
ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 468 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. 4 ವಿದ್ಯಾರ್ಥಿಗಳು ಮತ್ತು ಮಕ್ಕಳು ಆನ್‌ಲೈನ್ ಬೆಟ್ಟಿಂಗ್ ಗೆ ಬಲಿಯಾದರೆ, 31 ಇತರರು ಪ್ರಾಣಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಆನ್‌ಲೈನ್ ಗೇಮ್‌ನಿಂದ ವಿದ್ಯಾರ್ಥಿಗಳು ಯುವಕರು, ಮಕ್ಕಳು ಹಾಗೂ ಸಾರ್ವಜನಿಕರನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಪೊರೀಗ್ರಾಮ್ ಅನ್ನು ನಡೆಸಲಾಗುತ್ತಿದೆ. ಆನ್‌ಲೈನ್ ಗೇಮ್ಸೌನಿಂದ ಆಗುವ ದುಷ್ಪರಿಣಾಮದ ಬಗ್ಗೆ ಉಪನ್ಯಾಸ, ದೃಶ್ಯರೂಪಕಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಬೀಟ್‌ಗಳಲ್ಲಿ ಯುವಕರು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಯಾವುದೇ ತರಹದ ಆನ್‌ಲೈನ್ ಗೇಮ್ಸೌ ಮತ್ತು ಆನ್‌ಲೈನ್ ಜೂಜುಗಳ ಚಟಕ್ಕೆ ಒಳಗಾಗದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಅಲ್ಲದೆ ಆನ್‌ಲೈನ್ ಗೇಮ್ಸೌ ಮತ್ತು ಜೂಜಿನಲ್ಲಿ ತೊಡಗಿಸಿಕೊಂಡವರ ಮೇಲೆ ದಾಳಿ ನಡೆಸಿ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ.
ಬೆಟ್ಟಿಂಗ್ ನಿಯಂತ್ರಣ ಆಗುತ್ತಿಲ್ಲವೇಕೆ?
ಆನ್‌ಲೈನ್ ಬೆಟ್ಟಿಂಗ್ ನಿಯಂತ್ರಣದ ಸಲುವಾಗಿ ಕರ್ನಾಟಕ ಪೊಲೀಸ್ ಕಾಯ್ದೆ-(ತಿದ್ದುಪಡಿ) 2021ರಲ್ಲಿ ಸೆಕ್ಷನ್ 2ಕ್ಕೆ ತಿದ್ದುಪಡಿ ಮಾಡಿ ಕಾಯ್ದೆಯಲ್ಲಿ ಆನ್‌ಲೈನ್ ಆಟಗಳು ಮತ್ತು ಕೌಶಲ್ಯದ ಆನ್‌ಲೈನ್ ಆಟಗಳನ್ನು ಸೇರ್ಪಡೆ ಮಾಡಲಾಗಿದೆ.
ಈ ಆದೇಶ ಹೊರಡಿಸಿದ ನಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸುತ್ತಿರುವ ಕುರಿತಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಈ ರಿಟ್ ಅರ್ಜಿಗೆ ಸಂಬಂಧಿಸಿದಂತೆ, ಉಚ್ಚನ್ಯಾಯಾಲಯವು ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ತಡೆಹಿಡಿಯಲಾಗಿರುತ್ತದೆ.
ನಂತರದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ತೀರ್ಪಿನ ವಿರುದ್ಧ ಮೇಲನವಿ ಸಲ್ಲಿಸಲು ನಿರ್ದೇಶಿಸಿದ ಮೇರೆಗೆ, ಸರ್ಕಾರದ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲನವಿ ಸಲ್ಲಿಸಲಾಗಿರುತ್ತದೆ. ಸರ್ವೋಚ್ಛ ನ್ಯಾಯಾಲಯವು ಎಸ್.ಎಲ್.ಪಿ ಅರ್ಜಿಯನ್ನು ಪುರಸ್ಕರಿಸಿದೆ ಹಾಗೂ ಪ್ರಕರಣ ವಿಚಾರಣಾ ಹಂತದಲ್ಲಿದೆ.
ಎಷ್ಟು ಪ್ರಕರಣ, ಎಷ್ಟು ಬಲಿ?
2023ರಲ್ಲಿ ಪ್ರಕರಣ -171, ಸಾವು – 7
2024ರಲ್ಲಿ ಪ್ರಕರಣ – 133, ಸಾವು- 11
2025ರಲ್ಲಿ ಪ್ರಕರಣ- 161, ಸಾವು – 17
2026ರಲ್ಲಿ ಪ್ರಕರಣ – 3, ಸಾವು – 0
