Friday, April 17, 2026
Homeರಾಜ್ಯರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಮುಖ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಮುಖ

Farmer suicides in the state are down

ಬೆಂಗಳೂರು,ಫೆ.20- ಒಂದು ಕಾಲದಲ್ಲಿ ದೇಶದಲ್ಲೇ ಅತೀ ಹೆಚ್ಚು ರೈತರ ಆತಹತ್ಯೆ ಮಾಡಿಕೊಳ್ಳುತ್ತಿದ್ದ ಎರಡನೇ ರಾಜ್ಯ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಕರ್ನಾಟಕದಲ್ಲಿ ಅನ್ನದಾತರ ಆತಹತ್ಯೆ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದಕ್ಕೆ ವರುಣನ ಕೃಪೆ ಜೊತೆಗೆ ಸರ್ಕಾರದ ಗೃಹಲಕ್ಷಿ ಯೋಜನೆಯೂ ಪ್ರಮುಖ ಕಾರಣವಾಗಿದೆ.

2025-26ರ ಆರ್ಥಿಕ ವರ್ಷದ ಮೊದಲ 9 ತಿಂಗಳು, ಅಂದರೆ 2025ರ ಡಿಸೆಂಬರ್‌ 31ರವರೆಗಿನ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 414 ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಂಬಾ ಇಳಿಕೆ ಕಂಡಿದೆ.
2023-24ರಲ್ಲಿ ಬರೋಬ್ಬರಿ 1,254 ಪ್ರಕರಣಗಳು ಇದ್ದರೆ, 2024-25ರಲ್ಲಿ ಅದು 1,178ಕ್ಕೆ ಇಳಿದಿತ್ತು. ಈಗ ಕೇವಲ 414ಕ್ಕೆ ಇಳಿದಿದೆ.

ಸರ್ಕಾರದ ಗೃಹಲಕ್ಷಿ ಯೋಜನೆ ರೈತರ ಕೈ ಹಿಡಿದಿದೆ. ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ. ಅಂದರೆ ವರ್ಷಕ್ಕೆ 24,000 ರೂ. ಈ ದುಡ್ಡು ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ಆರ್ಥಿಕ ಬೆಂಬಲ ನೀಡಿದೆ. ಇದರ ಜೊತೆಗೆ ಕಳೆದ ಎರಡು ವರ್ಷದಿಂದ ವರುಣ ಕೂಡ ಕೃಪೆ ತೋರಿದ್ದು, ಬೆಳೆ ಚೆನ್ನಾಗಿ ಬಂದಿರುವುದು ಈ ಪ್ರಕರಣಗಳು ಕಡಿಮೆಯಾಗಲು ಕಾರಣವಾಗಿದೆ.

ಆದರೆ ವರದಿಯಾಗಿರುವ 414 ಪ್ರಕರಣಗಳಲ್ಲಿ 55 ಪ್ರಕರಣಗಳಿಗೆ ಪರಿಹಾರ ಸಿಕ್ಕಿಲ್ಲ. ಏಕೆಂದರೆ ಈ ಸಾವುಗಳಿಗೆ ಕೃಷಿ ಸಂಕಷ್ಟ ಅಥವಾ ಸಾಲದ ಸಮಸ್ಯೆ ಕಾರಣ ಅಲ್ಲ ಎಂದು ಅಧಿಕಾರಿಗಳು ಅಲ್ಲಗೆಳೆದಿದ್ದಾರೆ.

ಜಿಲ್ಲಾವಾರು ಲೆಕ್ಕ ನೋಡಿದರೆ ಸಾಂಸ್ಕೃತಿಕ ನಗರಿ ಮೈಸೂರಲ್ಲೇ ಅತಿ ಹೆಚ್ಚು ಅಂದರೆ 41 ಕೇಸ್‌‍ ವರದಿಯಾಗಿವೆ. ಇದರಲ್ಲಿ 10 ಅರ್ಜಿ ವಜಾ ಆಗಿವೆ. ಆಮೇಲೆ 40 ಕೇಸ್‌‍ಗಳೊಂದಿಗೆ ಕಲಬುರಗಿ ಎರಡನೇ ಸ್ಥಾನದಲ್ಲಿದ್ದರೆ 36 ಪ್ರಕರಣಗಳೊಂದಿಗೆ ಬೆಳಗಾವಿ 3ನೇ ಸ್ಥಾನದಲ್ಲಿದೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 2,809 ರೈತರು ಆತಹತ್ಯೆ ಪ್ರಕರಣಗಳು ದಾಖಲಾಗಿವೆ. ರೈತರ ಆತಹತ್ಯೆ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿರುವುದನ್ನು ಅಂಕಿಅಂಶಗಳು ದೃಢಪಡಿಸಿವೆ. ಇದು ರಾಜ್ಯ ಸರ್ಕಾರದ ಯೋಜನೆಗಳು ವಿಫಲವಾಗಿಲ್ಲ ಎಂಬುದನ್ನು ತೋರಿಸುತ್ತವೆ.

2025-26ರಲ್ಲಿ ಇಲ್ಲಿಯವರೆಗೆ 377 ಪ್ರಕರಣಗಳು ದಾಖಲಾಗಿವೆ. ಪ್ರಕರಣ ಇಳಿಮುಕವಾಗುತ್ತಿದ್ದರೂ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನೀಡಿರುವ ಅಂಕಿಅಂಶಗಳ ಪ್ರಕಾರ ರೈತರ ಆತಹತ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿತ್ತು.

ಕಳೆದ 3 ವರ್ಷದಲ್ಲಿ ರಾಜ್ಯದಲ್ಲಿ 2416 ಮಂದಿ ರೈತರು ಆತಹತ್ಯೆಗೆ ಶರಣಾಗಿದ್ದಾರೆ. ಅದರಲ್ಲೂ ಹಾವೇರಿ, ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ.
2024ರಲ್ಲಿ 1250 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 1082 ಪ್ರಕರಣಗಳು ಅರ್ಹ ಎಂದು ಪರಿಗಣಿಸಲಾಗಿದೆ. ಇವುಗಳಿಗೆ ಪರಿಹಾರ ನೀಡಲಾಗಿದೆ. 2023-24ರಲ್ಲಿ 54.10 ಕೋಟಿ ಪರಿಹಾರ ಹಣವನ್ನು ಆತಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಲುಪಿಸಲಾಗಿದೆ.

ಇನ್ನು 2024-25ರಲ್ಲಿ 1082 ಆತಹತ್ಯೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 920 ಪ್ರಕರಣಗಳು ಅರ್ಹ ಎಂದು ಪರಿಗಣಿಸಲಾಗಿದೆ. 815 ಪ್ರಕರಣಗಳಲ್ಲಿ ಒಟ್ಟು 40.17 ಕೋಟಿ ಪರಿಹಾರ ನೀಡಲಾಗಿದೆ. 2025-26ರಲ್ಲಿ 84 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 65 ಪ್ರಕರಣಗಳು ಅರ್ಹ ಎಂದು ಪರಿಗಣಿಸಲಾಗಿದ್ದು, 3.25 ಕೋಟಿ ಪರಿಹಾರದ ಹಣ ಪಾವತಿ ಮಾಡಲಾಗಿದೆ.

ಕೈ ಹಿಡಿದ ಗ್ಯಾರಂಟಿ:
ರಾಜ್ಯದಲ್ಲಿ ಆಹಾರ ಭದ್ರತೆ, ಬಡತನ ನಿರ್ಮೂಲನೆ ಮತ್ತು ಮಹಿಳಾ ಸಬಲೀಕರಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿರುವುದನ್ನು ದೃಢಪಡಿಸಿವೆ. ಜನರು ಗ್ಯಾರಂಟಿ ಯೋಜನೆಗಳ ಮೂಲಕ ಪಡೆಯುವ ಹಣವನ್ನು ಪೌಷ್ಠಿಕ ಆಹಾರ, ಔಷಧಗಳು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಬ್ಯಾಂಕ್‌ ಖಾತೆಗಳಿಗೆ ಸರಕಾರದಿಂದ ನಗದು ವರ್ಗಾವಣೆ ಪಡೆದ ಕುಟುಂಬಗಳ ಪ್ರಮಾಣ 2022ರಲ್ಲಿ ಶೇ.9.3ರಷ್ಟಿದ್ದದ್ದು 2024ರ ವೇಳೆಗೆ ಅದು ಶೇ.72.7ಕ್ಕೆ ಏರಿಕೆಯಾಗಿದೆ.
ಅಝೀಂ ಪ್ರೇಮ್‌ ಜೀ ವಿಶ್ವವಿದ್ಯಾಲಯದ ಅಧ್ಯಯನದಂತೆ, ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳೂ ಸೇರಿದಂತೆ ಅನೇಕ ಮಾರ್ಗಗಳಲ್ಲಿ ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. ಈ ಯೋಜನೆಯಿಂದ ಪ್ರತಿ ಮಹಿಳೆಗೆ ಮಾಸಿಕ ಸರಾಸರಿ 1,500ರಿಂದ 2 ಸಾವಿರ ರೂ. ಉಳಿತಾಯವಾಗುತ್ತಿದೆ. ರಾಜ್ಯದಾದ್ಯಂತ ಶೇ.19ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ.34ರಷ್ಟು ಮಹಿಳೆಯರು ಉತ್ತಮ ಸಂಬಳದ ಕೆಲಸ ಪಡೆಯಲು ಈ ಯೋಜನೆ ನೆರವಾಗಿದೆ. ಶೇ.83ರಷ್ಟು ಜನರು ಉತ್ತಮ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ.

ಹಸಿವು ಮುಕ್ತ ಕರ್ನಾಟಕದ ಕನಸನ್ನು ನನಸು ಮಾಡುತ್ತಿರುವ ಅನ್ನಭಾಗ್ಯ ಯೋಜನೆಯಿಂದಾಗಿ ಶೇ.83ರಷ್ಟು ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ಆದ ಉಳಿತಾಯದ ಹಣದಲ್ಲಿ ಬೇಳೆಕಾಳು, ತರಕಾರಿ, ಹಣ್ಣು, ಮೊಟ್ಟೆ ಮತ್ತು ಮಾಂಸ ಮುಂತಾದ ಗುಣ ಮಟ್ಟದ ಆಹಾರ ಪದಾರ್ಥಗಳನ್ನು ಖರೀದಿಸುವ ಮೂಲಕ ಕುಟುಂಬದ ಪೌಷ್ಠಿಕತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಗೃಹಲಕ್ಷಿ ಯೋಜನೆಯಿಂದ ಶೇ.80ರಷ್ಟು ಮಹಿಳೆಯರು, ತಾವು ಹೆಚ್ಚು ಆರ್ಥಿಕವಾಗಿ ಸ್ವತಂತ್ರರಾಗಿರುವುದಾಗಿ ಹಾಗೂ ಕುಟುಂಬದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಶೇ.37ರಷ್ಟು ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಹಣವನ್ನು ಕುಟುಂಬದ ಹಳೆಯ ಸಾಲ ಮರುಪಾವತಿಸಲು ಬಳಸುವ ಮೂಲಕ ಸಾಲ ಮುಕ್ತರಾಗುತ್ತಾರೆ ಎಂದು ಹೇಳಲಾಗಿದೆ.

ಸರಕಾರವು ಜಾರಿಗೆ ತಂದಿರುವ ಮಹಿಳಾ ಸಬಲೀಕರಣದ ಯೋಜನೆಗಳಿಂದ ಕರ್ನಾಟಕವು ಹೊಸ ಮಾದರಿಯನ್ನು ಪ್ರಾರಂಭಿಸಿದೆ. ಈ ಯೋಜನೆಗಳಿಂದ ಕೇವಲ ಆರ್ಥಿಕ ನೆರವು ಮಾತ್ರವಲ್ಲದೆ ಸಾಮಾಜಿಕ ಪರಿವರ್ತನೆಯೂ ಸಾಧ್ಯವಾಗಿದೆ ಎಂದು ಅಭಿಪ್ರಾಯಗಳು ವ್ಯಕ್ತವಾಗಿವೆ.

RELATED ARTICLES

Latest News