Friday, April 17, 2026
Homeರಾಜ್ಯಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಶೋಭಾ ಯಾತ್ರೆ ಮೇಲೆ ಕಲ್ಲು ತೂರಿದ ಪ್ರಕರಣ : 8 ಮಂದಿ...

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಶೋಭಾ ಯಾತ್ರೆ ಮೇಲೆ ಕಲ್ಲು ತೂರಿದ ಪ್ರಕರಣ : 8 ಮಂದಿ ವಶಕ್ಕೆ

Stone pelting incident on Shivaji Jayanti procession in Bagalkot: 8 people detained

ಬೆಂಗಳೂರು,ಫೆ.20- ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಅಂಗವಾಗಿ ನಡೆಯುತ್ತಿದ್ದ ಶೋಭಾ ಯಾತ್ರೆಯ ಮೇಲೆ ಕಲ್ಲು ತೂರಿದ್ದ ಘಟನೆಗೆ ಸಂಬಂಧಪಟ್ಟಂತೆ ತಂಜೀರ್‌ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಬಂಧಿತರನ್ನು ತಂಜೀರ್‌ (28) , ಮುಜ್ಜು (23), ಸದ್ದಾಂ(22), ಫಯಾಜ್‌(24),
ಸರ್ಫರಾಜ್‌(33), ರಿಯಾನ್‌(21), ಅಯಾನ್‌(19), ವಸೀಮ್‌‍(22) ಎಂದು ಗುರುತಿಸಲಾಗಿದೆ.

ನಿನ್ನೆ ಬಾಗಲಕೋಟೆಯ ನವನಗರದ ವಿದ್ಯಾಗಿರಿಯಲ್ಲಿ ಶಿವಾಜಿ ಜಯಂತ್ಯೋತ್ಸವದ ಅಂಗವಾಗಿ ಶೋಭಾಯಾತ್ರೆ ಆಯೋಜಿಸಲಾಗಿತ್ತು. ರಂಜಾನ್‌ ಉಪವಾಸ ಆರಂಭದ ದಿನಗಳಾಗಿರುವುದರಿಂದ ಮಸೀದಿಯಲ್ಲಿ ಪ್ರಾರ್ಥನೆ ಮುಗಿದ ಬಳಿಕವೇ ಮೆರವಣಿಗೆಗೆ ಸಮಯ ನೀಡಲಾಗಿತ್ತು. ರಾತ್ರಿ 9.30ರ ಬಳಿಕ ಶಿವಾಜಿ ಭಾವಚಿತ್ರವನ್ನು ಒಳಗೊಂಡ ಶೋಭಾಯಾತ್ರೆ ಡಿಜೆಯೊಂದಿಗೆ ನಡೆಯುತ್ತಿತ್ತು. ಕಿಲ್ಲಾಗಲ್ಲಿಯ ಪಂಕಾ ಮಸೀದಿಯಿಂದ ರಾತ್ರಿ 10.06 ಗಂಟೆಗೆ ಸರಿಯಾಗಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದೆ.

ಶೋಭಾಯಾತ್ರೆ ಇನ್ನೂ ಹಿಂದೆ ಇದ್ದಿದ್ದರಿಂದ ಭದ್ರತೆಗೆ ನಿಯೋಜಿಸಿದ್ದ ಪೊಲೀಸರೆಡೆಗೆ ಕಲ್ಲು ಹಾಗೂ ಪಾದರಕ್ಷೆಗಳುನ್ನು ತೂರಿದ್ದಾರೆ. ಎಸ್‌‍ಪಿ ಸಿದ್ದಾರ್ಥ ಗೋಯಲ್‌ ಅವರ ಭುಜಕ್ಕೆ ಕಲ್ಲು ತಾಗಿದೆ. ಕೆಲ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಪೊಲೀಸರು ಶಾಂತರೀತಿಯಿಂದ ವರ್ತಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಹಿಂದೂ ಸಂಘಟನೆಗಳ ಮುಖಂಡರು ಪ್ರತಿಭಟನೆಗೆ ಮುಂದಾಗಿದ್ದಾರೆ. ಪೊಲೀಸರು ಮನವೊಲಿಸಿದ್ದಾರೆ. ಮಸೀದಿಯ ಮುಖಂಡರು ಮುಂದೆ ನಿಂತು ಮೆರವಣಿಗೆಗೆ ಮುಂದೆ ಸಹಕರಿಸಿದ್ದಾರೆ.

ಅದರ ಬಳಿಕ ಗಲಭೆಗಳು ಆರಂಭಗೊಂಡಿವೆ. ಕೆಲವರು ರಸ್ತೆ ಬದಿಯಲ್ಲಿದ್ದ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಬಾಗಲಕೋಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಿಸಿಟಿವಿ ಕ್ಯಾಮೆರಾವನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ತಂಝೀರ್‌ ಹಾಗೂ ಎಂಟು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಫೆಬ್ರವರಿ 24ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌‍ಪಿ ಸಿದ್ದಾರ್ಥ ಗೋಯೆಲ್‌, ಘಟನೆಗೆ ಕೋಮು ಗಲಭೆಯ ವ್ಯಾಖ್ಯಾನ ಮಾಡಬಾರದು. ಬಾಗಲಕೋಟೆಯಲ್ಲಿ ಭಾವೈಕ್ಯತೆ ಇದೆ. ಶೋಭಾಯಾತ್ರೆ ಮುಂದುವರೆಯಲು ಮಸೀದಿ ಮುಖಂಡರೇ ಸಹಕಾರ ನೀಡಿದ್ದಾರೆ. ನಿನ್ನೆ ರಾತ್ರಿ 10.06 ಗಂಟೆಗೆ ಸರಿಯಾಗಿ ಕಿಡಿಗೇಡಿಗಳು ಕಲ್ಲುತೂರಾಟ ಮಾಡಿದ್ದಾರೆ. ಅವರನ್ನು ಬಂಧಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಪಾದರಕ್ಷೆಗಳನ್ನು ಇಡಲು ಮಸೀದಿಯ ಗೋಡೆ ಅಂಚಿನಲ್ಲಿದ್ದ ಶೂ ರ್ಯಾಕ್‌ಗೆ ಆಸರೆಯಾಗಿ ಎರಡು ಕಲ್ಲುಗಳಿದ್ದವು. ತಂಝೀರ್‌ ಆ ಕಲ್ಲುಗಳನ್ನೇ ಮೆರವಣಿಗೆಯತ್ತ ತೂರಿದ್ದಾನೆ. ಅಲ್ಲಿದ್ದ ಚಪ್ಪಲಿಯನ್ನು ಎಸೆದಿದ್ದಾನೆ. ಆತ ತೂರಿದ್ದ ಕಲ್ಲುಗಳು ಶೋಭಾ ಯಾತ್ರೆವರೆಗೂ ತಲುಪಿಲ್ಲ. ಕೆ ಎಸ್‌‍ ಆರ್‌ ಪಿ ಯ ಸಿಬ್ಬಂದಿಗಳು ತಮಗೆ ಬಿದ್ದಿವೆ ಎಂದಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಎರಡೂ ಕಡೆಯ ಮುಖಂಡರು ಪೊಲೀಸರಿಗೆ ಸಹಕರಿಸಿದ್ದಾರೆ. ಆರೋಪಿ ತಂಜೀರ್‌ ಈ ಹಿಂದೆ ಇದೇ ರೀತಿಯ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವ ಮಾಹಿತಿಗಳು ಸದ್ಯಕ್ಕಿಲ್ಲ ಎಂದರು.

ಸಭೆ:
ಘಟನೆ ನಡೆದು 14 ಗಂಟೆಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಮುಖಂಡರು ಇಂದು ಕಿಲ್ಲಾಗಲ್ಲಿಯ ಶಿವಭವಾನಿ ಸಭಾಂಗಣದಲ್ಲಿ ಸಭೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಫೆಬ್ರವರಿ 24ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ, ಆದರೆ ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ಆರೋಪಿಸಿ ನಿಷೇಧಾಜ್ಞೆ ನಡುವೆಯೂ ಸಭೆ ನಡೆಸುವುದಾಗಿ ಹಿಂದೂ ಸಂಘಟನೆಗಳ ಮುಖಂಡರು ಹೇಳಿದ್ದರು.

RELATED ARTICLES

Latest News