Tuesday, April 21, 2026
Homeಇದೀಗ ಬಂದ ಸುದ್ದಿಮಲ್ಲಿಕಾರ್ಜು ಮುತ್ಯಾಗೆ ಪೊಲೀಸರ ನೋಟಿಸ್‌‍

ಮಲ್ಲಿಕಾರ್ಜು ಮುತ್ಯಾಗೆ ಪೊಲೀಸರ ನೋಟಿಸ್‌‍

ಬೆಂಗಳೂರು,ಮಾ.2- ಅಪ್ರಾಪ್ತೆ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆಪೋಕ್ಸೊ ದಾಖಲಾಗಿರುವ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್‌ರೋಜಾ ಗ್ರಾಮದ ಯಮನೂರಪ್ಪ ಮುತ್ಯಾ ಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೊಲೀಸರು ನೋಟಿಸ್‌‍ ಜಾರಿ ಮಾಡಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿದ್ದರು. ಮಲ್ಲಿಕಾರ್ಜುನ ಮುತ್ಯಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಲಾಗಿತ್ತು. ಮಠದ ಗೋಡೆಯ ಮೇಲೆ ಅಂಟಿಸಲಾಗಿತ್ತು. ಆದರೆ ಮಲ್ಲಿಕಾರ್ಜುನ ಮುತ್ಯಾ ವಿಚಾರಣೆಗೆ ಹಾಜರಾಗಲಿಲ್ಲ. ಇದರಿಂದ ಬಂಧನದ ಭೀತಿ ಎದುರಾಗಿದೆ.

ಮಲ್ಲಿಕಾರ್ಜುನ ಮುತ್ಯಾ ದಾಖಲಾದ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಕಲಬುರಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಪೋಷಕರು ದೂರು ನೀಡಿಲ್ಲ, ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ವಾದಿಸಲಾಗಿದೆ.

ಹೈಕೋರ್ಟ್‌ ಕಲಬುರಗಿ ವಿಭಾಗೀಯ ಪೀಠದಲ್ಲಿ ಈ ಅರ್ಜಿ ಸಲ್ಲಿಕೆಯಾಗಿದೆ. ಮೊದಲು ವಿಚಾರಣೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ವಕೀಲರ ಮನವಿ ಮೇರೆಗೆ ವಿಚಾರಣೆ ಮುಂದೂಡಲಾಗಿದೆ. ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಕಾಲಾವಕಾಶ ಕೇಳಲಾಗಿದೆ.

ಪ್ರಕರಣದ ನಂತರ ಮಠದಲ್ಲಿ ಭಕ್ತರು ಸಭೆ ಸೇರಿದ್ದಾರೆ. ಪ್ರಕರಣ ರದ್ದು ಮಾಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ಕೆಲವರು ಎರಡು ದಿನಗಳ ಗಡುವು ನೀಡಿದ್ದಾರೆ ಎಂದು ವರದಿಯಾಗಿದೆ. ಭಕ್ತರು ಪ್ರಕರಣವನ್ನು ಸುಳ್ಳು ಎಂದು ಹೇಳುತ್ತಿದ್ದಾರೆ. ವೀಡಿಯೊವನ್ನು ತಿರುಚಿ ವೈರಲ್‌ ಮಾಡಲಾಗಿದೆ ಎಂದು ವಾದಿಸುತ್ತಾರೆ.

ಸದ್ಯ ಪೊಲೀಸರು ತನಿಖೆ ಮುಂದುವರೆಸು ತ್ತಿದ್ದಾರೆ. ಮಲ್ಲಿಕಾರ್ಜುನ ಮುತ್ಯಾ ಹಾಜರಾಗದ ಕಾರಣ ಬಂಧನದ ಸಾಧ್ಯತೆ ಇದೆ. ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ನಿರ್ಧಾರ ಬರಬಹುದು. ಈ ಪ್ರಕರಣವು ಸ್ಥಳೀಯವಾಗಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

RELATED ARTICLES

Latest News