ಬೆಂಗಳೂರು, ಜೂ.13- ಕರ್ತವ್ಯ ಲೋಪಕ್ಕೆ ಮತ್ತೊಬ್ಬ ಪೊಲೀಸ್ ಇನ್ಸ್ ಪೆಕ್ಟರ್‌ಗೆ ತಲೆದಂಡವಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶಿವಕುಮಾರ್ ಲೋಹರ್ ಅವರನ್ನು ಅಮಾನತು ಗೊಳಿಸಲಾಗಿದೆ. ಇತ್ತೀಚೆಗೆ ಲವ್‌ಜಿಹಾದ್ ಪ್ರಯತ್ನಕ್ಕೆ ಹೆದರಿದ ಬಾಲಕಿಯೊಬ್ಬಳು ಆತಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣದಲ್ಲಿ ಸರಿಯಾದ ತನಿಖೆಯಾಗದೆ ಕರ್ತವ್ಯ ಲೋಪವಾಗಿದೆ ಎಂದು ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ಪ್ರಾಥಮಿಕ ಪರಿಶೀಲನೆ ನಡೆಸಿ, ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಗೊಳಿಸಿದೆ. ನಿನ್ನೆ ಬೆಂಗಳೂರಿನ ಕಾಡುಗೋಡಿಯ ಪೊಲೀಸ್ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಮತ್ತು ರೈಟರ್ ಅವರನ್ನು ಕರ್ತವ್ಯ ಲೋಪಕ್ಕಾಗಿ ಅಮಾನತು ಮಾಡಲಾಗಿತ್ತು.
ತಾಯಿ ಪ್ರಿಯಕರನಿಂದಲೇ ಕೊಲೆಯಾಗಿದ್ದ ಬಾಲಕಿಯ ಪ್ರಕರಣದಲ್ಲಿ ಏಪ್ರಿಲ್‌ನಲ್ಲೇ ಮರಣೋತ್ತರ ವರದಿ ಬಂದಿದ್ದರೂ 3 ತಿಂಗಳ ಕಾಲ ಯಾವ ಕ್ರಮವನ್ನೂ ಕೈಗೊಳ್ಳದೇ ಪೊಲೀಸ್ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದಾರೆ ಎಂದು ನಿನ್ನೆ ಅಮಾನತುಗೊಳಿಸಲಾಗಿತ್ತು.
ಇಂದು ಧಾರವಾಡ ಠಾಣೆಯ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಲಾಗಿದೆ. ಸಚಿವರ ಖಾತೆ ಬದಲಾವಣೆಯಾಗುತ್ತಿದ್ದಂತೆ ಕರ್ತವ್ಯಲೋಪ ವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಗಳು ಕೂಡ ತ್ವರಿತಗತಿಯಲ್ಲಿ ಜರುಗಲಾರಂಭಿಸಿವೆ.
ಪೊಲೀಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಉದ್ದೇಶ ಪೂರ್ವಕವಾದ ಉದಾಸೀನತೆ ಅನುಸರಿಸುಸತ್ತಿದ್ದಾರೆ ಎಂಬ ಟೀಕೆಗಳಿವೆ.ಕೆಲಸದ ಒತ್ತಡದ ನೆಪದಲ್ಲಿ ಗಂಭೀರ ಪ್ರಕರಣಗಳನ್ನು ಕಡೆಗಣಿಸುವುದು, ಜನರ ಸಮಸ್ಯೆಗೆ ಸ್ಪಂದಿಸದೆ, ಕಂಡು ಕಾಣದಂತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಪ್ರಗತಿ ಪರಿಶೀಲನಾ ನಡೆಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
