ಬೆಂಗಳೂರು, ಮಾ.6- ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿಯಿಂದ ವಿಶ್ಲೇಷಿಸಿ ಗುಣಾತ್ಮಕವಾದ ಗರ್ಭಿಣಿ ಮತ್ತು ಪ್ರಸವ ಆರೈಕೆ ಸೇವೆಯನ್ನು ನೀಡಲಾಗುವುದು ಈ ನಿಟ್ಟಿನಲ್ಲಿ ಹೆರಿಗೆ ಆಸ್ಪತ್ರೆಗಳಲ್ಲಿ ಮಾನವ ಸಂಪನೂಲ ಮತ್ತು ಆಧುನಿಕ ಉಪಕರಣಗಳನ್ನು ನೀಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಜೆಟ್ ಭಾಷಣದಲ್ಲಿ ಅವರು ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಯಡಿ ಶಾಲಾ ಕಾಲೇಜುಗಳ 52 ಲಕ್ಷ ಮಕ್ಕಳಿಗೆ ರಕ್ತ ಹೀನತೆ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 11.7 ಲಕ್ಷ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, ಇದರಲ್ಲಿ 3.7 ಲಕ್ಷ ಮಕ್ಕಳು ಸಂಪೂರ್ಣ ಗುಣಮುಖರಾಗಿದ್ದಾರೆಂದು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 900 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ತಿಳಿ ಹೇಳಿದ್ದಾರೆ. ಆಯುಷಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ 2018 ಚಿಕಿತ್ಸಾ ಪ್ಯಾಕೇಜ್ ದರವನ್ನು ಪರಿಷ್ಕರಿಸಿ ಹೆಚ್.ಬಿ.ಪಿ 2022 ಪ್ಯಾಕೇಜ್ ದರವನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಇದರಿಂದ ಬಡ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯ ಸಿಗಲಿದೆ ಮತ್ತು ಇದಕ್ಕಾಗಿ 400 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದೆಂದು ಭರವಸೆ ನೀಡಿದ್ದಾರೆ.
ಪ್ರಸ್ತುತ ಯಶಸ್ವಿನಿ , ವಿಮಾ ಯೋಜನೆ ಮತ್ತು ಇತರ ಯೋಜನೆಗಳಿಗೆ ಅನುದಾನವನ್ನು ಒಗ್ಗೂಡಿಸುವ ಮೂಲಕ ಅನುಷ್ಠಾನಗೊಳಿಸಲಾಗುವುದೆಂದು ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಟ್ರಾಮಾ ಕೇರ್ ಸೇವೆಯನ್ನು ಒದಗಿಸಲು ತುರ್ತು ಚಿಕಿತ್ಸಾ ವಿಭಾಗ, ಶಸ್ತ್ರ ಚಿಕಿತ್ಸಾ ಕೊಠಡಿ ಮತ್ತು ಐಸಿಯುಗಳಿಗೆ ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳನ್ನು ಹಂತ ಹಂತವಾಗಿ ಪೂರೈಸಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 45 ಕೋಟಿ ರೂ.ಗಳ ಅನುದಾನ ಕಲ್ಪಿಸಲಾಗಿದೆಯೆಂದು ಹೇಳಿದರು.
ಈಗಾಗಲೇ 86 ತಾಲ್ಲೂಕುಗಳಲ್ಲಿ ಪೌಷ್ಠಿಕ ಪುನಃಶ್ಚೇತನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ 63 ತಾಲ್ಲೂಕುಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲು 6 ಕೋ.ರೂ.ಗಳನ್ನು ಒದಗಿಸಲಾಗುವುದು ಎಂದಿದ್ದಾರೆ.
ಟೈಪ್-1 ಮಧುಮೇಹದಿಂದ ಬಳಲುತ್ತಿರುವ 18 ವರ್ಷದೊಳಗಿನ ಮಕ್ಕಳ ಆರೋಗ್ಯ ಸುಧಾರಿಸಲು ಉಚಿತ ಇನ್ಸುಲಿನ್ ಕೇಂದ್ರಗಳನ್ನು ನೀಡಲಾಗುವುದು. ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಆದ್ಯತೆ ಮೇಲೆ ಅನುದಾನವನ್ನು ಮೀಸಲಿಡಲಾಗುವುದು ಗಣಿಗಾರಿಕೆ ಜಿಲ್ಲೆಗಳಾದ ಬಳ್ಳಾರಿ ವಿಜಯನಗರ ಚಿತ್ರದುರ್ಗ ಮತ್ತು ತುಮಕೂರಿನ ಎಲ್ಲಾ ತಾಲ್ಲೂಕುಗಳಲ್ಲಿ ಸಮಗ್ರ ಆರೋಗ್ಯ ಕೇಂದ್ರಗಳನ್ನು ಕೆಎಂಸಿಆರ್ ಅನುದಾನದಡಿ ವಿಸ್ತರಿಸಲಾಗುವುದೆಂದು ತಿಳಿಸಿದ್ದಾರೆ.
ಗಂಭೀರ ದೀರ್ಘಕಾಲಿಕ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೇರಳ ಮಾದರಿಯಲ್ಲಿ ಗೃಹಾಧರಿತ ಉಪಶಮನ ಆರೈಕೆಯನ್ನು ಪಲ್ಲಿಯುಂ ಇಂಡಿಯಾ ಸಂಸ್ಥೆಯೊಂದಿಗೆ ನೀಡಲಾಗುವುದು ರಾಜ್ಯದಲ್ಲಿ 50 ಡಯಾಲಿಸಿಸ್ ಕೇಂದ್ರಗಳಲ್ಲಿ 150 ಹಾಸಿಗೆಗಳ ಸಾಮರ್ಥ್ಯವನ್ನು ಒದಗಿಸುವ ಮೂಲಕ ಸೌಲಭ್ಯಕಲ್ಪಿಸಲು 20 ಕೋಟಿ ಅನುದಾನ ನೀಡಲಾಗುವುದು.
ದಾವಣಗೆರೆಯ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಇತ್ಯಾದಿ ಆಡಳಿತಾತಕ ಹುದ್ದೆಗಳಿಗೆ ನೇಮಕಾತಿಯಲ್ಲಿ ವಸ್ತುನಿಷ್ಠತೆಯನ್ನು ತರುವ ಮೂಲಕ ಸಾರ್ವಜನಿಕ ಆರೋಗ್ಯ ವೃಂದವನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದೆಂದು ತಿಳಿಸಿದ್ದಾರೆ.
