Wednesday, April 29, 2026
Homeರಾಷ್ಟ್ರೀಯಭಾರತದ ಮೇಲೆ ಯುದ್ಧಗಳ ಎಫೆಕ್ಟ್ : ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ...

ಭಾರತದ ಮೇಲೆ ಯುದ್ಧಗಳ ಎಫೆಕ್ಟ್ : ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ ಸಾಧ್ಯತೆ

Impact of War in West Asia on India, Inflationary Pressure

ನವದೆಹಲಿ, ಮಾ.7- ಮದ್ಯಪ್ರಾಚ್ಯ ಹಾಗೂ ಉಕ್ರೇನ್‌ ಯುದ್ಧದ ಪರಿಣಾಮ ದೇಶದಲ್ಲೆಡೆ ಅಡುಗೆ ಅನಿಲ ದರ ಗಣನೀಯವಾಗಿ ಏರಿಕೆಯಾಗಿದ್ದು, ಇದರ ಬೆನ್ನಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯ ಆತಂಕವೂ ಜನಸಾಮಾನ್ಯರನ್ನು ಕಾಡುತ್ತಿದೆ.

ದೇಶದ ತೈಲ ಕಂಪನಿಗಳು ಗೃಹ ಬಳಕೆಯ 14.2ಕೆ.ಜಿ. ಸಿಲಿಂಡರ್‌ ಬೆಲೆಯನ್ನು ಏಕಾಏಕಿ 60 ರೂ.ಗಳಿಗೆ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ ದರವನ್ನು 114.50 ರೂ.ಗೆ ಹೆಚ್ಚಳ ಮಾಡಿವೆ.ಈ ದರ ಇಂದಿನಿಂದಲೇ ಅನುಷ್ಠಾನಕ್ಕೆ ಬರುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಇದು ಎರಡನೇ ಬಾರಿ ಅಡುಗೆ ಅನಿಲದ ದರ ಏರಿಕೆಯಾಗಿದೆ. ಈ ಮೂಲಕ ಬೆಂಗಳೂರು ಹಾಗೂ ದೆಹಲಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ ಬೆಲೆ 853 ರೂ. ರಿಂದ 913 ರೂ.ಗಳಷ್ಟಾಗಲಿದೆ. ಉಜ್ವಲ ಫಲಾನುಭವಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಸಿಲಿಂಡರ್‌ ಬೆಲೆ ಗ್ರಾಹಕರ ಜೇಬು ಕತ್ತರಿಸಲಿದೆ.

ಹೋಟೆಲ್‌ ಹಾಗೂ ಇತರ ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಏರಿಕೆಯಿಂದ 1768.50 ರೂ.ಗಳಿದ್ದ ಸಿಲಿಂಡರ್‌ ಬೆಲೆ ಏಕಾಏಕಿ 1883 ರೂ.ಗಳಷ್ಟಾಗಲಿದೆ. ಸಿಲಿಂಡರ್‌ ಬೆಲೆ ಏರಿಕೆಯಿಂದ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಊಟ, ತಿಂಡಿಯ ಬೆಲೆಯನ್ನು ಪರಿಷ್ಕರಣೆ ಮಾಡುವ ಅನಿವಾರ್ಯತೆ ಎದುರಾಗಲಿದೆ ಎಂದು ಹೋಟೆಲ್‌ ಮಾಲೀಕರು ವಿವರಿಸಿದ್ದಾರೆ.

ಅಡುಗೆ ಸಿಲಿಂಡರ್‌ನ ದರ ಏರಿಕೆ ಮಧ್ಯಮ ವರ್ಗವನ್ನು ಕಂಗಾಲಾಗುವಂತೆ ಮಾಡಿದೆ. ಈಗಾಗಲೇ ಪೆಟ್ರೋಲ್‌, ಡೀಸೆಲ್‌ ಮೇಲೆ ದರ ಹೆಚ್ಚಳ ಮಾಡುವುದರಿಂದ ಸಹಜವಾಗಿಯೇ ಬೆಲೆ ಏರಿಕೆಗಳು ಹೆಚ್ಚಾಗಿದೆ. ಸಿಲಿಂಡರ್‌ ದರಗಳು ಹೆಚ್ಚಾದರೆ ಅದರ ನೇರ ಪರಿಣಾಮ ಬೀರಲಿವೆ ಎಂಬ ಆತಂಕ ಕೇಳಿ ಬಂದಿದೆ.

ಕಳೆದ 2025ರ ಆಗಸ್ಟ್‌ 8ರಂದು ಸಿಲಿಂಡರ್‌ ದರ 50 ರೂ.ಗಳಷ್ಟು ಹೆಚ್ಚಳವಾಗಿತ್ತು. ವಿವಿಧ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2023ರ ಆಗಸ್ಟ್‌ 30ರಂದು 200 ರೂ. ದರವನ್ನು ಮತ್ತು 2024ರ ಮಾರ್ಚ್‌ 9 ರಂದು 100 ರೂ.ಗಳ ದರವನ್ನು ಕಡಿಮೆ ಮಾಡಿತ್ತು. 2021ರ ಆಗಸ್ಟ್‌ 1ರಂದು 10ರೂ. ಕಡಿಮೆಯಾಗಿದ್ದನ್ನು ಹೊರತುಪಡಿಸಿದರೆ 2014ರಿಂದಲೂ 52 ಬಾರಿ ಬೇರೆ ಬೇರೆ ಪ್ರಮಾಣದಲ್ಲಿ ಅಡುಗೆ ಅನಿಲದ ಸಿಲಿಂಡರ್‌ ದರ ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯನ್ನು ನೆಪ ಮಾಡಿಕೊಂಡು ಪದೇಪದೇ ದರ ಹೆಚ್ಚಳ ಮಾಡಲಾಗುತ್ತಿತ್ತು. ಇದು ಕೆಲವು ಬಾರಿ ಚುನಾವಣೆಯ ಚರ್ಚಾ ವಿಷಯವಾಗಿಯೂ ಬದಲಾಗಿತ್ತು. ಈಗ ಇರಾನ್‌- ಇಸ್ರೇಲ್‌ ಮತ್ತು ರಷ್ಯಾ-ಉಕ್ರೇನ್‌ ಹಾಗೂ ಜೋರ್ಡಾನ್‌ ಸಂಘರ್ಷದಿಂದಾಗಿ ಜಾಗತಿಕ ರಾಜಕಾರಣದ ಮೇಲೆ ಭಾರಿ ಪರಿಣಾಮ ಬೀರಿದೆ.
ಪ್ರಮುಖ ತೈಲ ಉತ್ಪನ್ನ ರಾಷ್ಟ್ರವಾಗಿರುವ ಇರಾನ್‌ ಮೇಲೆ ಅಮೆರಿಕಾ ಮತ್ತು ಇಸ್ರೇಲ್‌ ಜಂಟಿ ಕಾರ್ಯಾಚರಣೆ ನಡೆಸಿರುವುದಾಗಿ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರತದಲ್ಲಿ ಸದ್ಯದ ಮಟ್ಟಿಗೆ 6 ತಿಂಗಳವರೆಗೂ ತೈಲ ದಾಸ್ತಾನಿಗೆ ಯಾವುದೇ ಕೊರತೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಅದರ ನಡುವೆಯೂ ಬೆಲೆ ಏರಿಕೆಯಾಗಿದೆ.

ಈ ನಡುವೆ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಗಾಗಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಕಡಿತ ಮಾಡುವುದಾಗಿ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯ ಸಂದೇಶ ರವಾನಿಸಿದೆ. ಇದರಿಂದಾಗಿ ಹೋಟೆಲ್‌ ಮಾಲಿಕರು ಆತಂಕಕ್ಕೆ ಒಳಗಾಗಿದ್ದು ಕಾಳಸಂತೆ ಮಾರಾಟ, ಬೆಲೆ ಏರಿಕೆಯ ಸಮಸ್ಯೆಗಳು ಉದ್ಭವಿಸುವ ದುಗುಡದಲ್ಲಿದ್ದಾರೆ. ಯಾವುದೇ ಕಾರಣಕ್ಕೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪ್ರಮಾಣವನ್ನು ಕಡಿತ ಮಾಡಬಾರದು ಎಂದು ಒತ್ತಾಯ ಕೇಳಿ ಬಂದಿದೆ.

RELATED ARTICLES

Latest News