ಮಂಡ್ಯ,ಮಾ.7- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ದಾಖಲೆ ಬಜೆಟ್‌ನ ಪರಿಣಾಮ ಮುಂದಿನ ದಿನಗಳಲ್ಲಿ ಜನರ ಮೇಲೆ ಹೊರೆ ಬೀಳಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜಿಲ್ಲೆಯ ವಿ.ಸಿ.ಫಾರ್ಮ್‌ನಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಜ್ಜಜಿತ, ಆಧುನಿಕ ಕ್ರೀಡಾಂಗಣದ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಜೆಟ್‌ನಲ್ಲಿ ಅಂಕಿಅಂಶಗಳನ್ನು ಮರೆಮಾಚಿದ್ದಾರೆ. ಜಿಡಿಪಿ ಬೆಳವಣಿಗೆ ಶೇ.25ರಷ್ಟು ಮೀರಿದೆ. ಅದರ ಪರಿಣಾಮ ಮುಂದೆ ಕಂಡುಬರುತ್ತದೆ. ಮಾತೆತ್ತಿದರೆ ಕೇಂದ್ರ ಸರ್ಕಾರವನ್ನು ದೂಷಣೆ ಮಾಡಲಾಗುತ್ತಿದೆ. ಎಲ್ಲಾ ರಂಗದಲ್ಲೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಹೊತ್ತಿನಹೊಳೆ ಯೋಜನೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಿದ್ದು, 2ನೇ ಹಂತ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಕೊರಟಗೆರೆ ಬಳಿ 5.5 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿತ್ತು. ಈಗ ಅದನ್ನು 1.2 ಟಿಎಂಸಿಗೆ ಇಳಿಸಿದ್ದಾರೆ.
ಪರಿಸರ ಇಲಾಖೆಯ ಅನುಮತಿ ದೊರೆತಿಲ್ಲ. ಎರಡು ವರ್ಷದಿಂದಲೂ ಯೋಜನೆ ಪೂರ್ಣಗೊಳಿಸುವುದಾಗಿ ಹೇಳುತ್ತಿದ್ದಾರೆ. ಈ ಸ್ಥಿತಿಯಾದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುವುದು ಯಾವಾಗ ಎಂದು ಪ್ರಶ್ನಿಸಿದರು.
ಭರಪೂರ ಘೋಷಣೆಗಳನ್ನು ಮಾಡಿದ್ದಾರೆ. ಆದರೆ ನೀರಾವರಿ ಯೋಜನೆಗಳಿಗೆ ಸಾಕಷ್ಟು ಹಣವನ್ನು ಇಟ್ಟಿಲ್ಲ. ಮೂರು ಗಂಟೆಗಳ ಕಾಲ ಬಜೆಟ್ ಖುಷಿಯಿಂದ ಓದಲಿಲ್ಲ. ಶ್ರಮಪಟ್ಟು ಓದಿದ್ದಾರೆ. ಕನ್ನಡ ಪಾಠ ಮಾಡುವ ಅವರು ಶ್ರಮಪಟ್ಟು ಓದುವುದರಲ್ಲೇ ಬಜೆಟ್ ಏನೆಂಬುದು ಗೊತ್ತಾಗಿದೆ ಟೀಕಿಸಿದರು.
ಸುಜ್ಜಜಿತ ಕ್ರೀಡಾಂಗಣ: ಖೇಲೊ ಇಂಡಿಯ ಯೋಜನೆಯಡಿ ಒಂದೂವರೆ ಎಕರೆ ಪ್ರದೇಶದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ಸುಜ್ಜಜಿತ, ಆಧುನಿಕ ಕ್ರೀಡಾಂಗಣ ಮಾಡಲು ಶಂಕುಸ್ಥಾಪನೆ ನೆರವೇರಿಸಲಾಗುವುದು. ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಬಲೀಕರಣ ಸಚಿವ ಮನ್ಸುಕ್ ಮಾಂಡವಿಯಾ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇಲ್ಲಿ ಕ್ರೀಡಾ ತರಬೇತಿ, ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುವುದು. 5 ಎಕರೆ ಬೇಕಾಗಿದ್ದು, ಒಂದೂವರೆ ಎಕರೆ ಮಾತ್ರ ನೀಡಲಾಗಿದೆ ಎಂದರು. ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲಾಗುವುದು. ಕೆಐಎಡಿಬಿ ವತಿಯಿಂದ ಮಲಸೌಕರ್ಯ ಸಹಿತ ಜಮೀನು ಒದಗಿಸಬೇಕು. ಆನಂತರ ನಮ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.
ಎಫ್‌ಕೆಸಿಸಿಐನ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ದ್ವಿಚಕ್ರ ವಾಹನ ನಿರ್ಮಾಣ ಘಟಕ ಸ್ಥಾಪನೆ ಮಾಡಲು ಆಸಕ್ತಿ ತೋರಿದ್ದಾರೆ. ಅದಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಯ ಜನರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಯುವಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲಾಗುವುದು ಎಂದರು.
ನಾನೇಕೆ ತಡೆಯಲಿ?:
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನು ನಾನೇಕೆ ತಡೆಯಲಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್‌ಗೆ ಬಿಟ್ಟು ಕೊಡುವಂತೆ ಒಂದು ವಾರದಿಂದಲೂ ಹೇಳುತ್ತಿದ್ದೇನೆ. ಶಿವಕುಮಾರ್ ಅವರು ಸಿದ್ದರಾಮಯ್ಯನವರ ಜೊತೆ ಮಾತನಾಡಲಿ. ಅದನ್ನು ಬಿಟ್ಟು ತನ್ನ ಮೇಲೆ ಆರೋಪ ಮಾಡಿದರೆ ಪ್ರಯೋಜನವಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಮದ್ದೂರು ಶಾಸಕ ಕದಲೂರು ಉದಯ್ ಅವರಿಗೂ ನನಗೂ ಹೋಲಿಕೆ ಮಾಡಬೇಡಿ. ನಾನೇನು ಶ್ರೀಲಂಕಾದಲ್ಲಿ ಕುಳಿತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಬೆಳವಣಿಗೆ ಹಿನ್ನಲೆಯಲ್ಲಿ ಅನಿಲ ದರ ಏರಿಕೆ ಸೇರಿದಂತೆ ಹಲವು ರೀತಿಯ ಹೊರೆ ಹೊರಲು ತಯಾರಾಗಬೇಕಿದೆ ಎಂದು ಅವರು ಅನಿಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.
