Thursday, April 30, 2026
Homeಇದೀಗ ಬಂದ ಸುದ್ದಿಇಂದಿರಾ ಕ್ಯಾಂಟೀನ್‌ಗಳ ಅವ್ಯವಹಾರ ತಡೆಗೆ ಎಐ ಕ್ಯಾಮೆರಾ

ಇಂದಿರಾ ಕ್ಯಾಂಟೀನ್‌ಗಳ ಅವ್ಯವಹಾರ ತಡೆಗೆ ಎಐ ಕ್ಯಾಮೆರಾ

AI camera to prevent irregularities in Indira Canteens

ಬೆಂಗಳೂರು, ಮಾ.10- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಹೈಟೆಕ್‌ ಸ್ಪರ್ಶ ನೀಡಲು ತೀರ್ಮಾನಿಸಲಾಗಿದೆ.ಇಂದಿರಾ ಕ್ಯಾಂಟೀನ್‌ಗಳ ಭದ್ರತೆ ನಿಯೋಜಿಸಲಾಗಿರುವ ಮಾರ್ಷಲ್‌ಗಳ ಸೇವೆಯನ್ನು ವಾಪಸ್‌‍ ಪಡೆದು ಹೋಟೆಲ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳನ್ನು ಅಳವಡಿಸಲು ಜಿಬಿಎ ನಿರ್ಧರಿಸಿದೆ.

ನಗರದ ಹಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆ ಗುತ್ತಿಗೆದಾರರು ನಿಜವಾದ ಮಾರಾಟಕ್ಕಿಂತ ಹೆಚ್ಚು ಸಂಖ್ಯೆಯನ್ನು ತೋರಿಸಿ ಸುಳ್ಳು ಲೆಕ್ಕ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಕೆಲ ಕ್ಯಾಂಟೀನ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಊಟ-ತಿಂಡಿ ವಿತರಣೆ ನಡೆದರೂ, ಜಿಬಿಎಗೆ ಹೆಚ್ಚಿನ ಸಂಖ್ಯೆಯನ್ನು ತೋರಿಸಿ ಬಿಲ್‌ ಸಲ್ಲಿಸಿ ಹಣ ಪಡೆಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.ಈ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗಳಲ್ಲಿ ನಿತ್ಯ ಎಷ್ಟು ಊಟ-ತಿಂಡಿ ಮಾರಾಟವಾಗುತ್ತಿದೆ ಎಂಬುದನ್ನು ಗಮನಿಸಲು ಮಾರ್ಷಲ್‌ಗಳನ್ನು ನೇಮಕ ಮಾಡಲಾಗಿತ್ತು.

ಆದರೆ ಕೆಲವು ಕಡೆ ಮಾರ್ಷಲ್‌ಗಳು ಕೂಡ ಗುತ್ತಿಗೆದಾರರ ಜೊತೆ ಕೈಜೋಡಿಸಿ ಸರಿಯಾದ ಲೆಕ್ಕ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.ಇದರಿಂದ ಮಾರ್ಷಲ್‌ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಈಗ ತಂತ್ರಜ್ಞಾನ ಬಳಕೆ ಮಾಡುವ ಬಗ್ಗೆ ಜಿಬಿಎ ತೀರ್ಮಾನಿಸಿದೆ.

ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಿ, ದಿನವೂ ಎಷ್ಟು ಮಂದಿ ಊಟ-ತಿಂಡಿ ಪಡೆಯುತ್ತಾರೆ ಎಂಬುದನ್ನು ಸ್ವಯಂಚಾಲಿತವಾಗಿ ದಾಖಲಿಸುವ ವ್ಯವಸ್ಥೆ ಮಾಡಲಾಗುವ ಸಾಧ್ಯತೆ ಇದೆ.

ಇನ್ನೂ ಎಐ ಕ್ಯಾಮೆರಾಗಳಿಂದ ಸಿಗುವ ಮಾಹಿತಿಯ ಆಧಾರದ ಮೇಲೆ ಗುತ್ತಿಗೆದಾರರಿಗೆ ಬಿಲ್‌ ಮೊತ್ತ ಪಾವತಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಜಿಬಿಎ ಯೋಜನೆ ರೂಪಿಸುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಾರ್ಯ ನಿರ್ವಹಿಸಿತ್ತಿರುವ ಮಾರ್ಷಲ್‌ ಗಳನ್ನು ತೆಗೆದು ಹಾಕಲು ಈಗಾಗಲೇ ಜಿಬಿಎ ಮುಖ್ಯ ಅಯುಕ್ತರು ಎಲ್ಲಾ ನಗರಪಾಲಿಕೆ ಅಯುಕ್ತರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News