ಬೆಂಗಳೂರು, ಮಾ.11- ಮಧ್ಯಪ್ರಾಚ್ಯ ಯುದ್ಧದಿಂದ ಎದುರಾಗಿರುವ ಗ್ಯಾಸ್ ಸಿಲಿಂಡರ್‌ಗಳ ಅಲಭ್ಯತೆ ಎಫೆಕ್ಟ್ ಇಂದಿರಾ ಕ್ಯಾಂಟೀನ್‌ಗಳು ಹಾಗೂ ಮಕ್ಕಳ ಬಿಸಿಯೂಟ ಯೋಜನೆಯ ಮೇಲೂ ಪರಿಣಾಮ ಬೀರಿದೆ.
ಆಮದು, ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿ ಇಂಧನ ಹಾಗೂ ಅನಿಲ ಸರಬರಾಜಿನಲ್ಲಿ ಸಮಸ್ಯೆ ಎದುರಾಗುತ್ತಿರುವುದರಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಹೊಟೇಲ್ ಉದ್ಯಮಕ್ಕೂ ಸಂಕಷ್ಟ ಎದುರಾಗುವ ಸ್ಥಿತಿ ನಿರ್ಮಾಣವಾಗಿದೆ.
ನಗರದ ಹಲವು ಹೊಟೇಲ್‌ಗಳಿಗೆ ಕಳೆದ ಎರಡುಮೂರು ದಿನಗಳಿಂದ ವಾಣಿಜ್ಯ ಗ್ಯಾಸ್ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ ಎನ್ನಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹೊಟೇಲ್‌ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಹೊಟೇಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತ ಗ್ಯಾಸ್ ಕೊರತೆಯ ಪರಿಣಾಮ ಇಂದಿರಾ ಕ್ಯಾಂಟೀನ್‌ಗಳಿಗೂ ತಟ್ಟಿದೆ. ಬೆಂಗಳೂರು ನಗರದಲ್ಲಿ ಸುಮಾರು 170ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡುವ ಕೇಂದ್ರ ಅಡುಗೆ ಮನೆಗಳಲ್ಲಿ ಸಿಲಿಂಡರ್ ಕೊರತೆ ಎದುರಾಗಿದೆ.
ಕೆಲವು ಇಂದಿರಾ ಕಿಚನ್‌ಗಳಲ್ಲಿ ಈಗಾಗಲೇ ಸಿಲಿಂಡರ್‌ಗಳು ಖಾಲಿಯಾಗಿದ್ದು, ಉಳಿದ ಕೆಲವು ಕಿಚನ್‌ಗಳಲ್ಲಿ ಮೂರುನಾಲ್ಕು ದಿನಗಳಿಗೆ ಸಾಕಾಗುವಷ್ಟು ಮಾತ್ರ ಗ್ಯಾಸ್ ಇರುವುದಾಗಿ ತಿಳಿದುಬಂದಿದೆ. ಯುದ್ಧ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ವಾಣಿಜ್ಯ ಗ್ಯಾಸ್ ದೊರಕುವಲ್ಲಿ ಇನ್ನಷ್ಟು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಕ್ಯಾಂಟೀನ್ ಗೆ ಆಹಾರ ಪೂರೈಕೆ ಗುತ್ತಿಗೆದಾರರು ಹೇಳಿದ್ದಾರೆ.
ಈ ಸಮಸ್ಯೆ ಶಾಲಾಕಾಲೇಜುಗಳ ಮಧ್ಯಾಹ್ನದ ಊಟ ಯೋಜನೆಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿನ ಅನೇಕ ಸರ್ಕಾರಿ ಹಾಗೂ ಜಿಬಿಎ ವ್ಯಾಪ್ತಿಯ ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ ಊಟ ತಯಾರಿಸಲು ಅಗತ್ಯವಿರುವ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಊಟ ಪೂರೈಕೆ ಮಾಡುವಲ್ಲಿ ತೊಂದರೆ ಉಂಟಾಗುವ ಆತಂಕ ವ್ಯಕ್ತವಾಗಿದೆ.
ಜಿಬಿಎ ವ್ಯಾಪ್ತಿಯ ಶಾಲಾಕಾಲೇಜುಗಳಲ್ಲಿ ಸುಮಾರು 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು, ನಗರದಲ್ಲಿನ ಸರ್ಕಾರಿ ಶಾಲೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಇವರಿಗೆ ಸರ್ಕಾರದಿಂದ ಪ್ರತಿದಿನ ಉಚಿತ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಲಾಗಿದೆ.ಆದರೆ ಗ್ಯಾಸ್ ಕೊರತೆ ಮುಂದುವರಿದರೆ ಮಕ್ಕಳ ಊಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಊಟ ಸರಬರಾಜು ಮಾಡುವ ಗುತ್ತಿಗೆದಾರರು ತಿಳಿಸಿದ್ದಾರೆ.
ಒಂದು ವೇಳೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ದೊರೆಯದ ಪರಿಸ್ಥಿತಿ ನಿರ್ಮಾಣವಾದರೆ ಇಂದಿರಾ ಕ್ಯಾಂಟೀನ್‌ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಅನಿವಾರ್ಯತೆ ಎದುರಾಗಬಹುದು ಎಂಬ ಸುಳಿವನ್ನೂ ನೀಡಿದ್ದಾರೆ.ಸದ್ಯ ಇರುವ ಸಿಲಿಂಡರ್‌ಗಳನ್ನು ಬಳಸಿ ಇನ್ನೂ ಒಂದು ವಾರದವರೆಗೆ ವ್ಯವಸ್ಥೆ ಮಾಡಬಹುದು. ಆದರೆ ಬಳಿಕ ಪರಿಸ್ಥಿತಿ ಹೇಗಿರುತ್ತದೆ ಎಂಬ ಆತಂಕ ಕ್ಯಾಂಟೀನ್ ಗುತ್ತಿಗೆದಾರರನ್ನು ಕಾಡುತ್ತಿದೆಯಂತೆ.
