ಧಾರವಾಡ,ಮಾ.22- ರಂಜಾನ್ ಹಬ್ಬದ ಸಡಗರದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯಾಟ ಬೇರೆಯೇ ಆಗಿದೆ. ಪ್ರಾರ್ಥನೆ ಮುಗಿಸಿ ಮರಳುತ್ತಿದ್ದ ಯುವಕರ ಬೈಕಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಕೆಲಗೇರಿ ಸೇತುವೆ ಬಳಿ ನಡೆದಿದೆ. ಲಕಮಾಪುರ ಗ್ರಾಮದ ಇಮಾಮಸಾಬ ಹೆಬ್ಬಳ್ಳಿ (21) ಹಾಗೂ ಆತನ ಗೆಳೆಯ ಮೊಹದ ಯೂನುಸ್ ಮುಲ್ಲಾನವರ(17) ಮೃತ ದುರ್ದೈವಿಗಳು.
ಇಮಾಮಸಾಬ ಅಣ್ಣನ ಮದುವೆ ನಿಶ್ಚಯವಾಗಿದ್ದ ಕಂಬಾರಗಣವಿಯ ಮನೆಗೆ ಹಬ್ಬದ ನಿಮಿತ್ತ ಪ್ರಾರ್ಥನೆಗಾಗಿ ಗೆಳೆಯನೊಂದಿಗೆ ತೆರಳಿದ್ದನು. ಕೆಲಸ ಮುಗಿಸಿ ಮರಳಿ ಬರುವಾಗ ಅಪರಿಚಿತ ವಾಹನವೊಂದು ಇವರ ಬೈಕಿಗೆ ಜೋರಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಇಮಾಮಸಾಬ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯ ಗೊಂಡಿದ್ದ ಮೊಹದಯೂನುಸ್‌ನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಕೂಡ ಇಂದು ಕೊನೆಯುಸಿರೆಳೆದಿದ್ದಾನೆ.
ಅಪಘಾತವೆಸಗಿದ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಸದೆ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿ ದ್ದಾರೆ. ಹಬ್ಬದ ದಿನವೇ ಇಬ್ಬರು ಯುವಕರನ್ನು ಕಳೆದುಕೊಂಡ ಲಕಮಾಪುರ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಈ ಕುರಿತು ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
