ಬೆಂಗಳೂರು, ಮಾ.23- ನಾಯಕತ್ವ ಬದಲಾವಣೆ ಎಂಬ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಸಚಿವ ಜಮೀರ್ ಅಹಮದ್ ಖಾನ್ ಮುಂದಿನ ಎರಡು ವರ್ಷಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿಯ ಶಾಸಕ ವಿ.ಸುನೀಲ್‌ಕುಮಾರ್ 2026-27ನೇ ಸಾಲಿಗೆ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, ಸಿದ್ದರಾಮಯ್ಯ ವಿತ್ತ ತಜ್ಞ ಅಷ್ಟೇ ಅಲ್ಲ. ಆರ್ಥಿಕ ತಜ್ಞ ಕೂಡ ಆಗಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಹೊಸ ಹೊಸ ಪದಗಳನ್ನು ಬಳಸಿದ್ದಾರೆ. ಅವುಗಳನ್ನು ನಮಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ.
ಟ್ರೋಟಿಂಗ್ ಎಕನಾಮಿ, 11ಜಿ, ಫಲಧಾರೆ, ಭಿಷತತ್ವ, ಬೆಂಕಿಯನ್ನು ಬೆಳಕಾಗಿಸುವುದು ಸೇರಿದಂತೆ ಹಲವಾರು ಪದಗಳು ಬಳಕೆಯಾಗಿದೆ. ಇವುಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಮುಂದಿನ ಬಜೆಟ್ ವೇಳೆ ಶಬ್ದಕೋಶವನ್ನು ಕೊಟ್ಟುಬಿಡಿ ಎಂದರು.
ಸಭಾಧ್ಯಕ್ಷರು ಈಗ ಶಬ್ದಕೋಶದ ಅಗತ್ಯವಿದೆ ಎಂದು ಕೇಳಿದರು, ನಿಮ ಕಚೇರಿಯ ಸಹಾಯದಿಂದ ಈ ಬಜೆಟ್ಟಿನಲ್ಲಿರುವ ಹೊಸ ಪದಗಳನ್ನು ಅರ್ಥಮಾಡಿಕೊಂಡಿದ್ದೇನೆ ಎಂದ ಸುನೀಲ್ ಕುಮಾರ್, ಮುಂದಿನ ಬಾರಿಯೂ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸಿದರೆ ಆಗ ಶಬ್ದಕೋಶ ಬೇಕಾಗಬಹುದು ಎಂದರು.
ಆಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೊಸ ಪದಗಳಿಗೆ ಸಚಿವ ಜಮೀರ್ ಅವರಿಂದ ಅರ್ಥ ಹೇಳಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದನ್ನು ಜಮೀರ್ ಕೇಳಿಸಿಕೊಂಡಿರಲಿಲ್ಲ. ತಮ ಹೆಸರು ಪ್ರಸ್ತಾಪವಾಗಿದ್ದಕ್ಕೆ ಏನು ಎಂದು ಅಶೋಕ ಅವರತ್ತ ಪ್ರಶ್ನಾರ್ಥಕವಾಗಿ ಕೇಳಿದರು. ಮಾತು ಬದಲಿಸಿದ ಅಶೋಕ್, ಮುಂದಿನ ಬಜೆಟನ್ನು ಸಿದ್ದರಾಮಯ್ಯ ಅವರೇ ಮಂಡಿಸುತ್ತಾರೆಯೇ ಎಂಬ ಪ್ರಶ್ನೆಯನ್ನು ಸುನೀಲ್‌ಕುಮಾರ್ ಕೇಳುತ್ತಿದ್ದಾರೆ ಎಂದರು.
ತಕ್ಷಣವೇ ಖಡಕ್ ಆಗಿ ಉತ್ತರಿಸಿದ ಸಚಿವ ಜಮೀರ್ ಅಹದ್ ಖಾನ್, ಮುಂದಿನ ಬಜೆಟ್ ಮಾತ್ರ ಅಲ್ಲ, ಇನ್ನು ಎರಡು ಬಜೆಟ್‌ಗಳನ್ನು ಸಿದ್ದರಾಮಯ್ಯ ಅವರೇ ಮಂಡಿಸುತ್ತಾರೆ ಎಂದು ಹೇಳಿದರು.
ಈ ಮೂಲಕ 2028ರ ವೇಳೆಗೆ ವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸಂದೇಶ ಸಾರಿದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ 2033ರವರೆಗೂ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುತ್ತದೆ ತಿರುಗೇಟು ನೀಡಿದರು.
