Thursday, April 30, 2026
Homeರಾಜಕೀಯಅಚ್ಚರಿಗೆ ಕಾರಣವಾದ ಸಾಮೂಹಿಕ ಛಾಯಾಚಿತ್ರ ಸೆಷನ್‌..!

ಅಚ್ಚರಿಗೆ ಕಾರಣವಾದ ಸಾಮೂಹಿಕ ಛಾಯಾಚಿತ್ರ ಸೆಷನ್‌..!

A surprise group photo session..!

ಬೆಂಗಳೂರು, ಮಾ.25- ಸಚಿವಸಂಪುಟ ಮೇ ತಿಂಗಳಿನಲ್ಲಿ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ಸ್ಪೀಕರ್‌ ಯು.ಟಿ. ಖಾದರ್‌ ಸಚಿವಸಂಪುಟ ಸೇರುವ ಅವಕಾಶಗಳಿರು ವುದರಿಂದಾಗಿ ಇಂದು ಅವಧಿ ಪೂರ್ವಕವಾಗಿ ಎಲ್ಲಾ ಶಾಸಕರ, ಸಚಿವರ ಫೋಟೋ ಸೆಷನ್‌ ನಡೆಸಲಾಗಿದೆ.
ವಿಧಾನಸೌಧದ ಪೂರ್ವ ದ್ವಾರದ ಬಳಿ ಫೋಟೋ ಸೆಷನ್‌ ನಡೆದಿದೆ.

ಸಾಮಾನ್ಯವಾಗಿ ವರ್ಷದ ಕೊನೆಯಲ್ಲಿ ಡಿಸೆಂಬರ್‌ ವೇಳೆಗೆ ಸಾಮೂಹಿಕ ಫೋಟೋ ಸೆಷನ್‌ ನಡೆಯುತ್ತದೆ. ಆದರೆ ಈ ಭಾರಿ ಫೆಬ್ರವರಿ ತಿಂಗಳಿನಲ್ಲಿ ಸಾಮೂಹಿಕ ಪೋಟೊ ಸೆಷನ್‌ ನಡೆಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ವಿಧಾನ ಪರಿಷತ್‌ನಲ್ಲಿ ಕೆಲ ಸದಸ್ಯರ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಸಭಾಪತಿಯವರು ಫೋಟೋ ಸೆಷನ್‌ ಮಾಡಿದರು. ಆದರೆ ವಿಧಾನಸಭೆಯಲ್ಲಿ ಅಂತಹ ಯಾವ ಸಾಧ್ಯತೆಗಳಿರಲಿಲ್ಲ. ಅದರ ನಡುವೆ ಕೂಡ ಫೋಟೋ ಸೆಷನ್‌ ಮಾಡಿದ್ದು ಅಚ್ಚರಿಗೆ ಕಾರಣವಾಗಿತ್ತು.

ಮೂಲಗಳ ಪ್ರಕಾರ ಉಪಚುನಾವಣೆಯ ಬಳಿಕ ಮೇ ತಿಂಗಳಿನಲ್ಲಿ ಸಚಿವ ಸಂಪುಟ ಪುನರ್‌ರಚನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಲವಾರು ಮಂದಿ ಸಂಪುಟ ಸೇರಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಹಿರಿಯ ಶಾಸಕರ ನಿಯೋಗವೊಂದು ಏಪ್ರಿಲ್‌ 11ರಂದು ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಿದೆೆ.

ಈ ಮಧ್ಯೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಸಂಪುಟ ಸೇರಲು ತೀವ್ರ ಆಸಕ್ತಿ ಹೊಂದಿದ್ದು, ಸ್ಪೀಕರ್‌ ಸ್ಥಾನ ತೊರೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷರಾಗಿ ಅವರಿಗೆ ಇದು ಕೊನೆಯ ಅಧಿವೇಶನ ಎಂಬ ಕಾರಣಕ್ಕೆ ಇಂದು ಗುಂಪು ಭಾವಚಿತ್ರ ನಡೆಸಲಾಯಿತು ಎಂದು ಹೇಳಲಾಗುತ್ತಿದೆ.

ಅಕಾಲಿಕವಾಗಿ ನಡೆಯುತ್ತಿರುವ ಗ್ರೂಪ್‌ ಫೋಟೋ ಸೆಷನ್‌ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ.ಈ ವೇಳೆ ಸಂಪುಟ ಪುನರ್‌ರಚನೆಯಾಗಿ ಅದರಲ್ಲಿ ತಮಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಈ ರೀತಿಯ ಕ್ರಮಗಳನ್ನು ಸ್ಪೀಕರ್‌ ಕೈಗೊಂಡಿರಬಹುದು ಎಂದು ಚರ್ಚೆಯಾಗಿದೆ. ಸಂಪುಟ ಪುನರ್‌ರಚನೆಯ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಖುದ್ದು ಮುಖ್ಯಮಂತ್ರಿಯವರೇ ಸಂಪುಟ ಪುನರ್‌ರಚನೆಯಾಗಬೇಕೆಂದು ಅಭಿಪ್ರಾಯ ಹೊಂದಿದ್ದು, ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

ಸ್ಪೀಕರ್‌ ಸ್ಥಾನಕ್ಕೆ ಹಿರಿಯರಾದ ಆರ್‌.ವಿ.ದೇಶಪಾಂಡೆ ಅವರನ್ನು ಕೂರಿಸುವ ಚರ್ಚೆಗಳಾಗುತ್ತಿವೆ. ಕೆಲವರು ಟಿ.ಬಿ.ಜಯಚಂದ್ರ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ವಿಧಾನಸೌಧದ ದ್ವಾರಗಳ ನವೀಕರಣ ಕಾಮಗಾರಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ವಿಧಾನಸಭಾಧ್ಯಕ್ಷರು ಆತುರಾತುರವಾಗಿ ಕೈಗೊಳ್ಳುವ ಮೂಲಕ ದಾಖಲೆ ಬರೆಯಲು ಮತ್ತು ತಮ ಅವಧಿಯಲ್ಲಿ ನಡೆದ ಅಭಿವೃದ್ಧಿ ಯೋಜನೆಗಳ ಹೆಜ್ಜೆ ಗುರುತನ್ನು ಬಿಟ್ಟು ಹೋಗಲು ಪ್ರಯತ್ನಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನರ್‌ರಚನೆ ಖಚಿತ ಎಂಬ ಸಂದೇಶ ರವಾನೆಯಾಗುತ್ತಿದೆ.

RELATED ARTICLES

Latest News