Friday, May 1, 2026
Homeರಾಜಕೀಯದಾವಣಗೆರೆ ದಕ್ಷಿಣ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್‌‍ 'ರಣತಂತ್ರ'

ದಾವಣಗೆರೆ ದಕ್ಷಿಣ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್‌‍ ‘ರಣತಂತ್ರ’

Congress 'strategy' to win Davangere South by-election

ಬೆಂಗಳೂರು, ಮಾ.26- ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌‍ ಪಕ್ಷ ರಣತಂತ್ರಗಾರಿಕೆ ರೂಪಿಸಿದ್ದು, ವಿರೋಧ ಪಕ್ಷಗಳ ವಿರುದ್ಧ ಆಕ್ರಮಣಕಾರಿ ಪ್ರಚಾರದ ಜೊತೆಗೆ ತಮ ಗ್ಯಾರಂಟಿ ಯೋಜನೆಗಳ ವೈಭವೀಕರಣಕ್ಕೆ ಆದ್ಯತೆ ನೀಡಲು ಮುಂದಾಗಿದೆ.

ಈ ಮೊದಲು ಕಾಂಗ್ರೆಸ್‌‍ ಪಕ್ಷವೇ ಗೆದ್ದಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳನ್ನು ಮರಳಿ ಧಕ್ಕಿಸಿಕೊಳ್ಳುವುದು ಕಾಂಗ್ರೆಸ್‌‍ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.ಒಂದು ವೇಳೆ ಸೋಲು ಕಂಡರೆ ಆಡಳಿತಾರೂಢ ಸರ್ಕಾರಕ್ಕೆ ಭಾರೀ ಮುಜುಗರವಾಗಲಿದೆ. ಸಿದ್ದರಾಮಯ್ಯ ಅವರ ಜನಪ್ರಿಯತೆ ಡಿ.ಕೆ.ಶಿವಕುಮಾರ್‌ ಅವರ ಸಂಘಟನಾ ಚತುರತೆ ವೈಫಲ್ಯ ಎಂಬ ಸಂದೇಶ ರವಾನೆಯಾಗುತ್ತದೆ.

2028ಕ್ಕೆ ಮರಳಿ ಕಾಂಗ್ರೆಸ್‌‍ ಅಧಿಕಾರಕ್ಕೆ ಬರಬೇಕು ಎಂಬ ಕನಸು ಕಟ್ಟಿಕೊಂಡಿರುವ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ಭ್ರಮನೀರಸನವಾಗಲಿದೆ. ಹೀಗಾಗಿ ಶತಾಯಗತಾಯ ಗೆಲ್ಲಲೇ ಬೇಕೆಂದು ಕಾಂಗ್ರೆಸ್‌‍ ಪಕ್ಷ ತನ್ನ ಶಕ್ತಿಯನ್ನು ಉಪಚುನಾವಣೆಯ ಕಣದ ಮೇಲೆ ಕ್ರೋಢಿಕರಿಸಿದೆ.

ಈ ನಡುವೆ 5 ರಾಜ್ಯಗಳ ವಿಧಾನಸಭಾ ಚುನಾವಣೆಗೆ ರಾಜ್ಯದ ಸಚಿವರು, ಶಾಸಕರು ಹಾಗೂ ಪ್ರಭಾವಿ ಮುಖಂಡರು ತೊಡಗಿಸಿಕೊಳ್ಳಬೇಕಿದೆ. ಹೀಗಾಗಿ ಉಪಚುನಾವಣೆ ಉಸ್ತುವಾರಿಗೆ ಸಮಸ್ಯೆಯಾಗುತ್ತಿದೆ.

ಡಿ.ಕೆ.ಶಿವಕುಮಾರ್‌ ಅವರು ಖುದ್ದು ಅಸ್ಸಾಂ ವಿಧಾನಸಭಾ ಚುನಾವಣಾ ಉಸ್ತುವಾರಿಯಾಗಿರುವುದರಿಂದ ಎರಡು ಕ್ಷೇತ್ರಗಳ ಚುನಾವಣೆಯ ಹೊಣೆಗಾರಿಗೆ ಸಿದ್ದರಾಮಯ್ಯ ಅವರ ಹೆಗಲಿಗೆ ಬಿದ್ದಂತಾಗಿದೆ. ಜೊತೆಗೆ ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಗಡಿ ಭಾಗದಲ್ಲೂ ಮುಖ್ಯಮಂತ್ರಿಯವರು ಪ್ರಚಾರ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಕ್ಷೇತ್ರಗಳು ಉಪಚುನಾವಣೆ ನಿರ್ಲಕ್ಷ್ಯಕ್ಕೆ ಒಳಗಾಗದಂತೆ ಕಾಂಗ್ರೆಸ್‌‍ ಪಕ್ಷ ಎಚ್ಚರಿಕೆ ವಹಿಸುತ್ತಿದೆ.

ಕೆಪಿಸಿಸಿಯ ಪದಾಧಿಕಾರಿಗಳನ್ನು ಮತ್ತು ಶಾಸಕರನ್ನು ಬೂತ್‌ ಮಟ್ಟಕ್ಕೆ ನಿಯೋಜನೆ ಮಾಡಿ, ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಗೃಹಲಕ್ಷ್ಮಿ ಕಂತುಗಳನ್ನು ಸಾಲಮಿತಿಯಲ್ಲಿ ಪಾವತಿ ಮಾಡುವ ಮೂಲಕ ಮಹಿಳಾ ಮತದಾರರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ.

ಬಿಜೆಪಿ ಗೆದ್ದರೆ, ಅಲ್ಪಸಂಖ್ಯಾತರಿಗೆ, ದಲಿತರಿಗೆ ರಕ್ಷಣೆ ಇರುವುದಿಲ್ಲ ಎಂಬ ಸಂದೇಶವನ್ನು ಬಿತ್ತುವ ಮೂಲಕ ಆಕ್ರಮಣಾಕಾರಿ ಪ್ರಚಾರ ನಡೆಸಿರುವುದಾಗಿ ಕಾಂಗ್ರೆಸ್‌‍ ಮೂಲಗಳು ತಿಳಿಸಿವೆ. ಬಿಜೆಪಿ ಕಾಂಗ್ರೆಸ್‌‍ ವಿರುದ್ಧ ವಂಶಪಾರಂಪರೆಯ ರಾಜಕಾರಣದ ಆರೋಪ ಮಾಡುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡದೆ ವಂಚಿಸಲಾಗಿದೆ ಎಂಬುದು ಬಿಜೆಪಿಗೆ ಟ್ರಂಪ್‌ ಕಾರ್ಡ್‌ ಆಗಿದೆ. ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಕಾಂಗ್ರೆಸ್‌‍ ಪಕ್ಷ ಹೆಣಗಾಡುತ್ತಿದೆ.

ಆಡಳಿತರೂಢ ಪಕ್ಷದಿಂದ ಅಧಿಕಾರ ಹಾಗೂ ಹಣಕಾಸು ದುರ್ಬಳಕೆಯಾಗುತ್ತಿದೆ ಎಂದು ವಿರೋಧ ಪಕ್ಷಗಳ ಸಾಮಾನ್ಯ ಅರೋಪವಾಗಿರುವುದರಿಂದ ಅದಕ್ಕೆ ತಲೆ ಕೆಡಿಸಿಕೊಳ್ಳದೇ ಈ ಭಾರಿಯ ಚುನಾವಣೆಯನ್ನು ವಿಭಿನ್ನವಾಗಿ ನಡೆಸುವಂತೆ ಹಿರಿಯ ನಾಯಕರು ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡ ಮುಖಂಡರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ.

ಚುನಾವಣೆಯ ಪ್ರಚಾರದ ವೇಳೆ ನಾಯಕತ್ವದ ವಿವಾದವನ್ನು ಯಾರೂ ಪ್ರಸ್ತಾಪಿಸಬಾರದು, ಜೊತೆಗೆ ಹೇಳಿಕೆಗಳು ವಿವಾದವಾಗದಂತೆ ಎಚ್ಚರಿಕೆ ವಹಿಸಬೇಕು. ಗೊಂದಲಕಾರಿ ಹೇಳಿಕೆಗಳ ಮೂಲಕ ಪಕ್ಷಕ್ಕೆ ಮುಜುಗರ ಉಂಟುಮಾಡಿದರೆ, ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸುವುದಾಗಿ ಕಾಂಗ್ರೆಸ್‌‍ ಎಚ್ಚರಿಕೆ ನೀಡಿದೆ.

RELATED ARTICLES

Latest News