Wednesday, April 29, 2026
Homeರಾಜ್ಯಪೆಟ್ರೋಲ್‌-ಡೀಸೆಲ್‌ ಕೊರತೆ ವದಂತಿ : ರಾಜ್ಯ ಸರ್ಕಾರದಿಂದ ಸ್ಪಷ್ಪನೆ

ಪೆಟ್ರೋಲ್‌-ಡೀಸೆಲ್‌ ಕೊರತೆ ವದಂತಿ : ರಾಜ್ಯ ಸರ್ಕಾರದಿಂದ ಸ್ಪಷ್ಪನೆ

Petrol-diesel shortage rumours: State government clarifies

ಬೆಂಗಳೂರು,ಮಾ.26- ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಕೊರತೆಯಾಗಿದೆ ಎಂಬ ವದಂತಿಗಳು ಹರಿದಾಡುತ್ತಿದೆ. ಈ ಕುರಿತು ರಾಜ್ಯ ಸರ್ಕಾರ ಸ್ಪಷ್ಪನೆ ನೀಡಿದ್ದು, ರಾಜ್ಯದ ಕೆಲವು ಭಾಗಗಳಲ್ಲಿ ಜನರು ಪೆಟ್ರೋಲ್‌ ಬಂಕ್‌ಗಳ ಮುಂದೆ ಕ್ಯೂನಲ್ಲಿ ನಿಂತಿದ್ದಾರೆ ಎಂಬ ವರದಿಗಳಿಂದ ಭಯಭೀತರಾಗಿ ಖರೀದಿಗೆ ಮುಂದಾಗಬೇಡಿ.ಗೊಂದಲಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದೆ.

ದೇಶಾದ್ಯಂತ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ ಎಂದು ರಾಜ್ಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.ರಾಜ್ಯದ ಕೆಲವು ಭಾಗಗಳಲ್ಲಿ ಜನರು ಬಾಟಲಿಗಳು ಮತ್ತು ಕ್ಯಾನ್‌ಗಳಂತಹ ಕಂಟೈನರ್ಗಳೊಂದಿಗೆ ಪೆಟ್ರೋಲ್‌ ಪಂಪ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ವಿವಿಧ ಮಾಧ್ಯಮಗಳ ವರದಿಗಳು ಸರ್ಕಾರದ ಗಮನಕ್ಕೆ ಬಂದಿದೆ. ಇದು ಪೆಟ್ರೋಲ್‌ ಮತ್ತು ಡೀಸೆಲ್‌ ಕೊರತೆಯನ್ನು ಸೂಚಿಸುವ ಸುಳ್ಳು ವದಂತಿಗಳಾಗಿವೆ ಎಂದು ಹೇಳಿದೆ.

ಗಂಭೀರ ಸುರಕ್ಷತಾ ಅಪಾಯಗಳು ಮತ್ತು ಬೆಂಕಿಯ ಅಪಾಯಗಳನ್ನು ಉಲ್ಲೇಖಿಸಿ, ಸಡಿಲವಾದ ಅಥವಾ ಸೂಕ್ತವಲ್ಲದ ಪಾತ್ರೆಗಳಲ್ಲಿ ಪೆಟ್ರೋಲ್‌ ಸಾಗಿಸುವುದು ಅಥವಾ ಸಂಗ್ರಹಿಸುವುದರ ವಿರುದ್ಧ ಜನರಿಗೆ ಸಲಹೆ ನೀಡಿದೆ. ವಾಹನದ ಟ್ಯಾಂಕ್‌ಗಳಿಗೆ ಮಾತ್ರ ಇಂಧನವನ್ನು ನೇರವಾಗಿ ಪೂರೈಸಲು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಸೂಚನೆ ನೀಡಿದೆ.

ಬಾಟಲಿಗಳು, ಕ್ಯಾನ್‌ಗಳು ಅಥವಾ ಯಾವುದೇ ಬಾಹ್ಯ ಪಾತ್ರೆಗಳಲ್ಲಿ ಇಂಧನ ವಿತರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜಾರಿಯಲ್ಲಿರುವ ಕಾನೂನುಗಳ ಪ್ರಕಾರ, ದೊಡ್ಡ ಪ್ರಮಾಣದಲ್ಲಿ ಅಥವಾ ಅನಧಿಕೃತ ಕಂಟೈನರ್‌ಗಳಲ್ಲಿ ಇಂಧನ ಸಂಗ್ರಹಿಸುವುದು ಕಾನೂನುಬಾಹಿರವಾಗಿದೆ ಎಂದು ಎಚ್ಚರಿಕೆ ನೀಡಿದೆ.

ಇಂಧನ ಪೂರೈಕೆ ಸಮರ್ಪಕವಾಗಿದ್ದು, ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ. ಈ ಮಧ್ಯೆ ಹುಬ್ಬಳ್ಳಿ ಧಾರವಾಡ ಪೊಲೀಸ್‌‍ ಕಮಿಷನರ್‌ ಎನ್‌.ಶಶಿಕುಮಾರ್‌ ನಗರ ವ್ಯಾಪ್ತಿಯಲ್ಲಿ ಇಂಧನ ಕೊರತೆ ಬಗ್ಗೆ ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದು, ಸಾಕಷ್ಟು ಪೂರೈಕೆ ಇದೆ ಎಂದು ಭರವಸೆ ನೀಡಿದ್ದಾರೆ.

RELATED ARTICLES

Latest News