ಕೊಚ್ಚಿ, ಮಾ.27- ಅಭ್ಯರ್ಥಿಯೊಬ್ಬರು ದ್ವೇಷ ಅಥವಾ ಸಮುದಾಯ ಪ್ರಚೋದಕ ಹೇಳಿಕೆ ನೀಡಿ ಸಮಾಜ ಹಾಗೂ ದೇಶಕ್ಕೆ ಹಾನಿ ಉಂಟುಮಾಡಿದರೆ ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕೇರಳ ಹೈಕೋರ್ಟ್ ಇಂದು ಪ್ರಶ್ನಿಸಿದೆ.
ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಅವರ ಪ್ರಚಾರ ವಿಡಿಯೋದಲ್ಲಿ ಸಮುದಾಯ ಪ್ರಚೋದಕ ಹೇಳಿಕೆ ನೀಡಿದ ಆರೋಪ ಕೇಳಿ ಬಂದಿದೆ. ಈ ಕುರಿತು ಚುನಾವಣಾ ಆಯೋಗ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಪ್ರಶ್ನೆ ಎತ್ತಿದೆ.
ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಅರ್ಜಿಯನ್ನು ವಿಲೇವಾರಿ ಮಾಡುತ್ತಾ, ಅರ್ಜಿದಾರ ಕೆಎಸ್‌ಯು ನಾಯಕ ಗೋಕುಲ್ ಕೆ. ಅವರು ಮಾರ್ಚ್ 20ರಂದು ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದಾರೆ. ಮನವಿ ಸ್ವೀಕರಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ವಿಚಾರಣೆ ವೇಳೆ, ಚುನಾವಣಾ ಅಧಿಕಾರಿ ನೀಡಿದ ದೂರಿನ ಆಧಾರದಲ್ಲಿ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ವಿವಾದಾತಕ ಪ್ರಚಾರ ವಿಡಿಯೋವನ್ನು ತಡೆ ಹಿಡಿಯಲಾಗಿದೆ ಎಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿತು.
ಆದರೆ, ಇಂತಹ ದ್ವೇಷ ಅಥವಾ ಸಮುದಾಯ ಹೇಳಿಕೆಗಳಿಂದ ಸಮಾಜ, ಸಮುದಾಯ ಮತ್ತು ದೇಶಕ್ಕೆ ಉಂಟಾಗುವ ಹಾನಿಯ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿದೆ ಎಂಬ ಕಾರಣ ನೀಡಿ ಸರ್ಕಾರದ ಯಂತ್ರಾಂಗವೇ ಕಾರ್ಯನಿರ್ವಹಿಸದೇ ಇರುವಂತಾಗಿದೆ ಹಾಗೂ ನ್ಯಾಯಾಲಯದ ನಿರ್ದೇಶನಗಳು ಮತ್ತು ಕಾನೂನುಬದ್ಧ ಕರ್ತವ್ಯಗಳನ್ನೂ ನಿರ್ಲಕ್ಷಿಸಲಾಗುತ್ತಿದೆ ಎಂಬ ಅಭಿಪ್ರಾಯವನ್ನೂ ನ್ಯಾಯಾಲಯ ವ್ಯಕ್ತಪಡಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಮಾದರಿ ನೀತಿ ಸಂಹಿತೆ ಕೇವಲ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಅನ್ಯಾಯಕರ ಲಾಭ ದೊರಕದಂತೆ ನೋಡಿಕೊಳ್ಳುವುದಕ್ಕಾಗಿ ಮಾತ್ರವಾಗಿದ್ದು, ನ್ಯಾಯಾಲಯದ ಆದೇಶಗಳು ಅಥವಾ ಕಾನೂನು ಕರ್ತವ್ಯಗಳ ಅನುಷ್ಠಾನಕ್ಕೆ ಅದು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಗೋಕುಲ್ ಅವರು ಮಾರ್ಚ್ 20ರಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದಾಗಿ ಅರ್ಜಿಯಲ್ಲಿ ತಿಳಿಸಿದ್ದಾರೆ.
ಗೋಪಾಲಕೃಷ್ಣನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್) ಕಲಂ 192 (ಗಲಭೆ ಪ್ರಚೋದನೆ ಉದ್ದೇಶದ ಪ್ರಚೋದಕ ಹೇಳಿಕೆ) ಹಾಗೂ ಜನಪ್ರತಿನಿಧಿತ್ವ ಕಾಯ್ದೆಯ ಕಲಂ 125 (ಚುನಾವಣೆಗೆ ಸಂಬಂಧಿಸಿದಂತೆ ವರ್ಗಗಳ ನಡುವೆ ವೈಷಮ್ಯ ಹುಟ್ಟಿಸುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾದಾತಕ ವಿಡಿಯೋದಲ್ಲಿ, ಗುರುವಾಯೂರು ಕ್ಷೇತ್ರದಲ್ಲಿ ಸುಮಾರು ಐದು ದಶಕಗಳಿಂದ ಹಿಂದೂ ಶಾಸಕರು ಆಯ್ಕೆಯಾಗಿಲ್ಲ ಎಂದು ಹೇಳಿರುವುದು, ಎಡಪಂಥೀಯ ಹಾಗೂ ಕಾಂಗ್ರೆಸ್ ಮೈತ್ರಿಗಳು ಆ ಸಮುದಾಯದ ಅಭ್ಯರ್ಥಿಗಳನ್ನು ನಿಲ್ಲಿಸಿಲ್ಲ ಎಂದು ಆರೋಪಿಸಿರುವುದಾಗಿ ತಿಳಿದು ಬಂದಿದೆ.
