Wednesday, April 29, 2026
Homeರಾಜ್ಯಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾಲೋಪ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾಲೋಪ

Security lapse at Chinnaswamy Stadium: Miscreants switch off CCTV cameras

ಬೆಂಗಳೂರು,ಏ.27- ಕಳೆದ ಶುಕ್ರವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ (ಆರ್‌ಸಿಬಿ) ಹಾಗೂ ಗುಜರಾತ್‌ ಟೈಟನ್ಸ್ ನಡುವಿನ ಕೊನೆಯ ಲೀಗ್‌ ಪಂದ್ಯ ನಡೆಯುವ ಮುನ್ನ ಸಿಸಿಟಿವಿಗಳ ಕೇಬಲ್‌ಗಳನ್ನು ಕತ್ತರಿಸಿ ಭಾರೀ ಭದ್ರತಾ ಲೋಪ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ವರ್ಷವಷ್ಟೇ ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತ ಉಂಟಾಗಿ ಹಲವಾರು ಮಂದಿ ಸಾವನ್ನಪ್ಪಿ, ಕೆಲವರು ಗಂಭೀರವಾಗಿ ಗಾಯಗೊಂಡ ಘಟನೆ ಮಾಸುವ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಭದ್ರತಾ ವೈಫಲ್ಯ ಉಂಟಾಗಿರುವುದು ಪ್ರೇಕ್ಷಕರನ್ನು ಆತಂಕಕ್ಕೀಡು ಮಾಡಿದೆ.

ಶುಕ್ರವಾರ ಐಪಿಎಲ್‌ ಪಂದ್ಯ ನಡೆಯುವ ದಿನದಂದೇ ಕ್ರೀಡಾಂಗಣದ ಪ್ರಮುಖ ಭದ್ರತಾ ವ್ಯವಸ್ಥೆಯಾದ ಸಿಸಿಟಿವಿ ಕ್ಯಾಮೆರಾಗಳ ಕೇಬಲ್‌ಗಳನ್ನು ಕತ್ತರಿಸಿ, ಇಡೀ ಭದ್ರತಾ ಜಾಲವನ್ನೇ ಅಸ್ತವ್ಯಸ್ತಗೊಳಿಸಲು ಯತ್ನಿಸಲಾಗಿದೆ. ಭದ್ರತಾ ನ್ಯೂನತೆಗಳ ನಡುವೆಯೂ ಪೊಲೀಸರು ಚಾಣಾಕ್ಷತನದಿಂದ ಕಾರ್ಯನಿರ್ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದಾರೆ.

ಐವಿಎಸ್‌‍ ಡಿಜಿಟಲ್‌ ಸಲೂಷನ್ಸ್ ಎಂಬ ಉಪವಿತರಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ.ಇ ಮತ್ತು ಅಬ್ದುಲ್‌ ಕಲಾಂ ಎಂಬುವವರು ಈ ಕೃತ್ಯವೆಸಗಿರುವುದು ಸಾಬೀತಾಗಿದೆ. ಸಂಸ್ಥೆ ಜೊತೆಗಿನ ಆಂತರಿಕ ಜಗಳದ ಕಾರಣವಾಗಿ ಇಬ್ಬರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ಐಪಿಎಲ್‌ ಪಾಸ್‌‍ ಇಲ್ಲದೇ ನಿಷ್ಕಿಯಗೊಂಡ ಕಾರ್ಡ್‌ ಬಳಸಿ ಕ್ರೀಡಾಂಗಣ ಪ್ರವೇಶ ಮಾಡಿದ್ದ ಇಬ್ಬರು ಎನ್‌ವಿಆರ್‌ ಮತ್ತು ಫೈಬರ್‌ ಸಂಪರ್ಕಗಳನ್ನು ಕಡಿತಗೊಳಿಸಿದ್ದರು. ಆರೋಪಿಗಳು ಅನಧಿಕೃತವಾಗಿ ಸಿಸಿಟಿವಿ ಸರ್ವರ್‌ರೂಮ್‌ ಪ್ರವೇಶಿಸಿದ್ದು, ಇವರ ಕೃತ್ಯದಿಂದ ಹಲವು ಜಾಗದ ಭದ್ರತಾ ವಿಚಾರದಲ್ಲಿ ಸಮಸ್ಯೆ ಉಂಟಾಗಿತ್ತು. ಜೊತೆಗೆ ಇದರಿಂದಾಗಿ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಂಡಿತ್ತು.

ಈ ಹಿಂದೆ ಭದ್ರತೆಗಾಗಿ ಮಾಡಲಾಗಿದ್ದ ಎಲ್ಲಾ ಪ್ರಮುಖ ಆರಂಭಿಕ ತಾಂತ್ರಿಕ ಕೆಲಸಗಳನ್ನು ಇವರು ಹಾಳು ಮಾಡಿದ್ದರು. ಆರೋಪಿಗಳು ಸರಿಯಾದ ಅನುಮತಿ ಇಲ್ಲದೆಯೇ ಕ್ರೀಡಾಂಗಣದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಸಿಸಿಟಿವಿ ನಿಯಂತ್ರಣ ಕೊಠಡಿಯನ್ನು ಪ್ರವೇಶಿಸಿರುವುದು ಮತ್ತು ನಂತರ ಪಾರ್ಕಿಂಗ್‌ ಪ್ರದೇಶದ ಬಳಿ ಇರುವ ಕನೆಕ್ಷನ್‌ ಬಾಕ್ಸ್ ಕಡೆಗೆ ಚಲಿಸುತ್ತಿರುವ ದೃಶ್ಯಗಳು ಲಭ್ಯವಿದೆ.

ಆರೋಪಿಗಳು ಎಸಗಿದ ವಿಧ್ವಂಸಕ ಕೃತ್ಯದಿಂದಾಗಿ ಕ್ರೀಡಾಂಗಣದ ಅತ್ಯಂತ ಪ್ರಮುಖ ಭದ್ರತಾ ಪ್ರದೇಶಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಸ್ಥಗಿತಗೊಂಡಿದ್ದವು. ಅವುಗಳಲ್ಲಿ ಪ್ರಮುಖವಾಗಿ ಎಲ್ಲಾ ಪ್ರವೇಶ ದ್ವಾರಗಳು, ಕ್ರೀಡಾಂಗಣದ ಸುತ್ತಮುತ್ತಲಿನ ಕ್ಯಾಮೆರಾಗಳು, ಸ್ಟ್ಯಾಂಡ್‌ ಕ್ಯಾಮೆರಾ ಬಂದ್‌ ಆಗಿತ್ತು. ಈ ಪ್ರಮುಖ ಸ್ಥಳಗಳ ಕ್ಯಾಮೆರಾಗಳು ಬಂದ್‌ ಆಗಿದ್ದರಿಂದ ಪಂದ್ಯದ ಸಂದರ್ಭದಲ್ಲಿ ಭದ್ರತಾ ಮೇಲ್ವಿಚಾರಣೆ ನಡೆಸಲು ಪೊಲೀಸರಿಗೆ ಅಗತ್ಯವಾದ ದತ್ತಾಂಶ ಅಥವಾ ಫೀಡ್‌ಗಳನ್ನು ಒದಗಿಸಲು ದೂರುದಾರರಿಗೆ ಸಾಧ್ಯವಾಗಲಿಲ್ಲ.

ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು, ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬದಲಿ ತಾಂತ್ರಿಕ ವ್ಯವಸ್ಥೆ ಮಾಡಿದರು. ಕೆಎಸ್‌‍ಸಿಎ ಆಡಳಿತ ಮಂಡಳಿಯ ಆದಿತ್ಯ ಭಟ್‌ ಎಂಬುವವರು ಈ ಸಂಬಂಧ ಕಬ್ಬನ್‌ ಪಾರ್ಕ್‌ ಠಾಣೆಗೆ ದೂರು ನೀಡಿದ್ದಾರೆ. 24ರಂದು ಪಂದ್ಯ ನಡೆಯುವ ಬೆಳಗ್ಗೆ ಪರಿಶೀಲಿಸಿದಾಗ ಕ್ಯಾಮೆರಾಗಳು ಅಫ್‌ ಆಗಿರುವುದು ಬೆಳಕಿಗೆ ಬಂದಿದೆ. ಸಿಸಿಟಿವಿ ಫುಟೇಜ್‌ಗಳ ಫೀಡ್‌ ಆಫ್‌ ಮಾಡಿದರ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.

ಆಂತರಿಕ ಸಮಸ್ಯೆ ಏನೆಂಬುದರ ಬಗ್ಗೆ ಕಬ್ಬನ್‌ಪಾರ್ಕ್‌ ಪೊಲೀಸರು ತನಿಖೆ ನಡೆಸಿದ್ದಾರೆ. ಐವಿಎಸ್‌‍ ಡಿಜಿಟಲ್‌ ಸಲ್ಯೂಷನ್‌ ಸಂಸ್ಥೆಯು ಚಿನ್ನಸ್ವಾಮಿ ಸ್ಟೇಡಿಯಂ ಒಳಗೆ ಸಿಸಿಟಿವಿಗಳ ನಿರ್ವಹಣೆ ಮಾಡುವ ಒಂದು ಸಂಸ್ಥೆಯಾಗಿದೆ. ಹೀಗಾಗಿ ಐವಿಎಸ್‌‍ ಡಿಜಿಟಲ್‌ ಸಂಸ್ಥೆಗೂ ಪೊಲೀಸರು ನೋಟೀಸ್‌‍ ಕೊಡಲು ಮುಂದಾಗಿದ್ದಾರೆ.

RELATED ARTICLES

Latest News