ಬೆಂಗಳೂರು,ಏ.27- ಸಂಚಾರಿ ನಿಯಮಗಳನ್ನು ಪಾಲಿಸಿ ಅಪಘಾತ ತಪ್ಪಿಸಿ ಪ್ರಾಣ ರಕ್ಷಿಸಿಕೊಳ್ಳಿ, ಅಪ್ರಾಪ್ತರ ಕೈಗೆ ವಾಹನ ಕೊಡಬೇಡಿ ಎಂದು ಪೊಲೀಸರು ಹಲವು ಬಾರಿ ಜಾಗೃತಿ ಮೂಡಿಸುತ್ತಿದ್ದರೂ ಸಹ ಪೋಷಕರು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.
ಇಲ್ಲೊಂದು ಪ್ರಕರಣದಲ್ಲಿ ಒಂದೇ ಸ್ಕೂಟರ್‌ನಲ್ಲಿ 6 ಮಂದಿ ಅಪ್ರಾಪ್ತರು ಸವಾರಿ ಮಾಡಿರುವುದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಒಂದು ವೇಳೆ ಈ ಸ್ಕೂಟರ್ ಅಪಘಾತಕ್ಕೀಡಾಗಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇತ್ತು ಎಂಬ ಆತಂಕವೂ ವ್ಯಕ್ತವಾಗಿದೆ.
ನಗರದ ಪಾದರಾಯನಪುರ ಮುಖ್ಯ ರಸ್ತೆಯ ಗೌರಿಪಾಳ್ಯ ಬಳಿ ಇರುವ ಆಟೋ ಗ್ಯಾಸ್ ಎದುರು ನಿನ್ನೆ ಬೆಳಗ್ಗೆ 10.45 ರ ಸುಮಾರಿನಲ್ಲಿ ಒಂದೇ ಸ್ಕೂಟರ್‌ನಲ್ಲಿ 6 ಮಂದಿ ಮಕ್ಕಳು ಸವಾರಿ ಮಾಡುತ್ತಿರುವುದನ್ನು ಆಶ್ಚರ್ಯ ಹಾಗೂ ಆತಂಕದಿಂದ ಗಮನಿಸಿದ ಬೈಕ್ ಸವಾರರೊಬ್ಬರು ತಮ ಮೊಬೈಲ್‌ನಲ್ಲಿ ಫೋಟೋ ತೆಗೆದು ಎಕ್‌್ಸನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದು, ಅಪ್ರಾಪ್ತರ ಕೈಗೆ ಸ್ಕೂಟರ್ ನೀಡಿದ ಪೋಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಮಾಗಡಿ ರಸ್ತೆ ಸಂಚಾರಿ ಠಾಣೆ ಪೊಲೀಸರು ಎಕ್ಸ್ ನಲ್ಲಿರುವ ಈ ಫೋಟೋ ಪರಿಶೀಲಿಸಿ ವಾಹನದ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆೆ. ವಾಹನದ ನೋಂದಣಿ ಸಂಖ್ಯೆ ಆಧಾರದಲ್ಲಿ ಮಾಲೀಕರ ವಿಳಾಸ ಪತ್ತೆ ಹಚ್ಚಿ ನಂತರ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
